
ಜಾತಿ ಗಣತಿಯ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದಿಂದ ಬೀದಿ ಬೀದಿಯಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ಅವರು ನಗರದ ಖಾಸಗಿ ಬಸ್ ನಿಲ್ದಾಣದ ಎದುರಿನ ಅಶೋಕ ವೃತ್ತದಲ್ಲಿ ಬಿಜೆಪಿ ಶಿವಮೊಗ್ಗ ನಗರ ವತಿಯಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಪ್ರತಿಭಟನೆ ಹಾಗೂ ರಸ್ತೆ ತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಸರ್ಕಾರ ಸಂಪೂರ್ಣ ಬಹುಮತ ಬಂದಿದೆ ಎಂಬ ದುರಹಂಕಾರದಿಂದ ಸಿಕ್ಕ ಅವಕಾಶವನ್ನು ದುರ್ಬಳಕೆ ಮಾಡುತ್ತಿದೆ. ನಾಗರಿಕರಿಗೆ ಇದರಿಂದ ತೊಂದರೆಯಾಗುತ್ತಿದ್ದು, ದೂರು ನೀಡಿದರೆ ಒಳ್ಳೆಯದು ಮತ್ತು ಕೆಟ್ಟದ್ದು ಯಾವುದು ಎಂದು ಗಮನಿಸುವ ಸೌಜನ್ಯ ಕೂಡ ತೋರುತ್ತಿಲ್ಲ. ಸಿಎಂ ಡಿಸಿಎಂ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ ವರ್ತಿಸುತ್ತಿದ್ದಾರೆ. ಏಕಪಕ್ಷೀಯ ನಿರ್ಧಾರಗಳನ್ನು ಮಾಡಿ ಪ್ರಜಪ್ರಭುತ್ವಕ್ಕೆ ಧಕ್ಕೆ ತರುವುದು ಅಲ್ಲದೇ ಸಂವಿಧಾನ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಇವತ್ತು ರಸ್ತೆ ತಡೆಯಿಂದ ನಾಗರಿಕರಿಗೆ ತೊಂದರೆಯಾಗಿದೆ ಎಂಬ ಅರಿವು ನಮಗಿದೆ. ಆದರೆ, ಜೀವಮಾನ ಪರ್ಯಂತ ಈ ಕಾಂಗ್ರೆಸ್ ದುರಾಡಳಿತ ಸಹಿಸಿಕೊಳ್ಳುವ ಬದಲು ಒಂದು ಗಂಟೆಯಾಗದರೂ ರಸ್ತೆ ತಡೆ ನಡೆಸಿ ಸರ್ಕಾರಕ್ಕೆ ಎಚ್ಚರಿಸುವುದು ಅನಿವಾರ್ಯವಾಗಿದೆ ಎಂದರು.
ಗಣಪತಿ ಹಬ್ಬಕ್ಕೆ ನೂರಾರು ಷರತ್ತುಗಳನ್ನು ವಿಧಿಸುವ ಸರ್ಕಾರ, ಡಿಜೆ ಬ್ಯಾನ್ ಮಾಡುವ ಸರ್ಕಾರ ಈದ್ ಮಿಲಾದ್ ಮೆರವಣಿಗೆಯಲ್ಲಿ ನೂರಾರು ಡಿಜೆ ಹಾಕಿ ತಲ್ವಾರ್ ತೋರಿಸಿದರೂ ಸುಮ್ಮನಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಾ ಹಬ್ಬದ ವಾತಾವರಣವನ್ನು ಕುಲಗೆಡಿಸಿ ಭಯದ ವಾತಾವರಣವನ್ನು ಈ ಕಾಂಗ್ರೆಸ್ ಸರ್ಕಾರ ನಿರ್ಮಿಸಿದೆ. ಅಭಿವೃದ್ಧಿ ಮಾಡುವ ತಾಕತ್ತು ಇವರಿಗಿಲ್ಲ. ಕಾಂಗ್ರೆಸ್ ನ ನೀತಿಯ ಪರಿಣಾಮವಾಗಿ ಇಡೀ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ಮಾಜಿ ಶಾಸಕ ಆರ್.ಕೆ. ಸಿದ್ಧರಾಮಣ್ಣ ಮಾತನಾಡಿ, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಪದೇ ಪದೇ ಎಂಪಿ ವಿರುದ್ಧ ಮಾತನಾಡುತ್ತಾರೆ. ಮೊದಲು ಅವರು ಸಿಎಂಗೆ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ ಎಂದು ಕೇಳಲಿ. ಉದ್ಧಟತನದ ಮಾತುಗಳನ್ನು ಅವರು ಬಿಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಸದನದಲ್ಲಿ ಮುಖ್ಯಮಂತ್ರಿಗಳೇ ೯೭ ಕೋಟಿ ರೂ. ವಾಲ್ಮೀಕಿ ನಿಗಮದ ಹಗರಣವನ್ನು ಒಪ್ಪಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ತಾವೇ ೧೪ ಸೈಟ್ ಗಳನ್ನು ವಾಪಸ್ ನೀಡಿ ಪಡೆದಿದ್ದು ಹೌದು ಎಂದು ಒಪ್ಪಿಕೊಂಡಿದ್ದಾರೆ. ಏನು ಪ್ರಶ್ನೆ ಕೇಳಿದರೂ ಮೊಂಡುತನದ ಉತ್ತರ ನೀಡುತ್ತಾರೆ. ೪ ತಿಂಗಳಿಂದ ಗೃಹಲಕ್ಷ್ಮೀಹಣ ಬಂದಿಲ್ಲ. ಯುವಕರಿಗೆ ನಿರುದ್ಯೋಗಿ ಭತ್ಯೆ ಬಂದಿಲ್ಲ. ಶಾಸಕರಿಗೆ ಕಳೆದ ಎರಡೂವರೆ ವರ್ಷಗಳಿಂದ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಲಿಲ್ಲ. ಅದರಲ್ಲೂ ಈಗ ತಮ್ಮ ಪಕ್ಷದ ಶಾಸಕರಿಗೊಂದು ನ್ಯಾಯ, ಇತರೆ ಪಕ್ಷದ ಶಾಸಕರಿಗೊಂದು ನ್ಯಾಯ ಮಾಡಿ ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಮಾಲತೇಶ್, ಮಂಜುನಾಥ್, ದೀನದಯಾಳ್, ಹರೀಶ್, ರಾಮು, ಜನೇಶ್ವರ್, ಕುಪೇಂದ್ರ, ಅಣ್ಣಪ್ಪ, ಚಂದ್ರಶೇಖರ್, ಅನಿತಾ ರವಿಶಂಕರ್, ರಶ್ಮಿ ಶ್ರೀನಿವಾಸ್,. ಸುರೇಖಾ ಮುರಳೀಧರ್, ಪ್ರಭಾಕರ್ ಮತ್ತಿತರರು ಇದ್ದರು.