ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಸೋಮವಾರ ಸಂಜೆ ಮಲೆನಾಡಿನ ವಿಶಿಷ್ಟ ಕಲೆಯಾದ ಅಂಟಿಗೆ ಪಂಟಿಗೆಯ ಜ್ಯೋತಿಯು ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ತೆರಳಿ ದೀಪ ನೀಡಿ, ಅಂಟಿಕೆ ಪಂಟಿಕೆ ಪದಗಳ ಮೂಲಕ ಶುಭ ಹಾರೈಸಿತು.

ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಸ್ಥಾನದಿಂದ‌ ಸಂಜೆ ಹೊರಟ ತೀರ್ಥಹಳ್ಳಿಯ ಬಾಂದ್ಯಾದ ಅಂಟಿಕೆ ಪಂಟಿಕೆಯ ಎರಡು ತಂಡಗಳನ್ನು ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಸಂಭ್ರಮದಿಂದ ಬರಮಾಡಿಕೊಂಡರು. ಸುಮಾರು 80 ಕ್ಕು ಹೆಚ್ಚು ಮೆನೆಗಳಿಗೆ ಅಂಟಿಕೆ ಪಂಟಿಕೆ ತಂಡ ಬೆಳಗಿನ ಜಾವದವರೆಗೂ ತೆರಳಿತು.

‘ದೀಪೋಳಿ ಎನ್ನಿರಣ್ಣಾ ..ಈ ಊರ ದೇವ್ರಿಗೆ’ , ‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ಣೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ’ ಎನ್ನುತ್ತಾ ಶುಭಹಾರೈಸಿದರು. ಅಂಟಿಕೆ ಪಂಟಿಕೆಯ ತಂಡ ತರುವ ಜ್ಯೋತಿ ಮನೆ ಪ್ರವೇಶಿಸಿದಾಗ ಮನೆಯವರು ದೀಪಕ್ಕೆ ಎಣ್ಣೆ ಎರೆದು ಪೂಜೆ ಸಲ್ಲಿಸುತ್ತಾರೆ. ಹೀಗೆ ದೀಪ ಬೆಳಗಿದ ಮನೆಯಲ್ಲಿ ಮುಂದಿನ ವರ್ಷದವರೆಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಯಿದೆ. ಹಾದಿ ಪದ, ಬಾಗಿಲು ಪದ, ಏಳ್ಗೆಯ ಪದಗಳ ಮೂಲಕ ಅಂಟಿಗೆ ಪಂಟಿಗೆ ಕಲಾವಿದರು ಹಾರೈಸಿದರು.

ಕಾರ್ಯಕ್ರಮವನ್ನು ಶಿವಮೊಗ್ಗ ‌ಶಾಖಾ ಮಠದ ನಾದನಂದನಾಥ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಸಂಘಟಿತವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾ, ಸಮಾಜದ ಏಳಿಗೆಗೆ ಹಾರೈಸುವ ಸಲುವಾಗಿ ನಮ್ಮ ಜನಪದರು ಅಂಟಿಗೆ ಪಂಟಿಗೆ ಕಲೆಯನ್ನು ರೂಪಿಸಿದ್ದಾರೆ. ಬೆಳಕನ್ನು ಸ್ವಾಗತಿಸುವ ದೀಪಾವಳಿಯು, ನಮ್ಮ ಜೀವನಕ್ಕೆ ಬೇಕಾದ ಬೆಳಕಿನ, ಎಂದರೆ ಅರಿವಿನ ಮಹತ್ವವನ್ನು ತಿಳಿದು, ಅದರ ಮಹತ್ವವನ್ನು ಅರಿತು ಆರಾಧಿಸುವ ಹಬ್ಬವಾಗಲಿ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ಡಿ.ಗಣೇಶ್, ಪಿ.ಕೆ.ಸತೀಶ್, ಭೈರಾಪುರ ಶಿವಪ್ಪಗೌಡ, ನಾರಾಯಣ, ಅಮೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *