ಡಿಸೆಂಬರ್ 25. ಕ್ಯಾಲೆಂಡರ್‌ನ ಒಂದು ದಿನ ಮಾತ್ರವಲ್ಲ; ಅದು ಮಾನವ ಹೃದಯಗಳೊಳಗೆ ಪ್ರೀತಿ ಮತ್ತು ಶಾಂತಿಯ ದೀಪವನ್ನು ಹಚ್ಚುವ ವಿಶಿಷ್ಟ ಕ್ಷಣ. ಕ್ರಿಸ್ಮಸ್ ಎಂಬ ಪದವೇ ಸೌಹಾರ್ದತೆ, ಕರುಣೆ ಮತ್ತು ತ್ಯಾಗದ ಪರಿಮಳವನ್ನು ಹರಡುವ ಹಬ್ಬದ ಸಂಕೇತವಾಗಿದೆ. ಯೇಸು ಕ್ರಿಸ್ತನ ಜನ್ಮವನ್ನು ಸ್ಮರಿಸುವ ಈ ದಿನ, ಮಾನವೀಯತೆಯ ಮಹತ್ವವನ್ನು ಜಗತ್ತಿಗೆ ನೆನಪಿಸುತ್ತದೆ.
ಅಂಧಕಾರ ತುಂಬಿದ ಕಾಲಘಟ್ಟದಲ್ಲಿ ಬೆಳಕಿನ ಸಂದೇಶವನ್ನು ಸಾರಲು ಜನಿಸಿದ ಯೇಸು ಕ್ರಿಸ್ತನು, ಪ್ರೀತಿಯೇ ಪರಮ ಧರ್ಮ ಎಂಬ ತತ್ತ್ವವನ್ನು ತನ್ನ ಜೀವನದ ಮೂಲಕ ಸಾರಿದನು. ಕ್ರಿಸ್ಮಸ್ ಹಬ್ಬವು ಆ ಸಂದೇಶವನ್ನು ಮತ್ತೆ ಮತ್ತೆ ನಮ್ಮ ಮನಸ್ಸುಗಳಿಗೆ ನೆನಪಿಸುತ್ತದೆ. ವೈಷಮ್ಯ, ದ್ವೇಷ ಮತ್ತು ಸ್ವಾರ್ಥದಿಂದ ಕೂಡಿದ ಇಂದಿನ ಸಮಾಜದಲ್ಲಿ, ಈ ಹಬ್ಬವು ಮಾನವ ಮನಸ್ಸಿಗೆ ಶಾಂತಿಯ ಸ್ಪರ್ಶವನ್ನು ನೀಡುತ್ತದೆ.
ಕ್ರಿಸ್ಮಸ್ ಸಂದರ್ಭದಲ್ಲಿ ಮನೆಮನೆಗಳು ದೀಪಗಳಿಂದ ಹೊಳೆಯುತ್ತವೆ, ಚರ್ಚುಗಳು ಭಕ್ತಿಗೀತಗಳಿಂದ ಪ್ರತಿಧ್ವನಿಸುತ್ತವೆ. ಆಕಾಶದಲ್ಲಿ ಮಿನುಗುವ ನಕ್ಷತ್ರಗಳು, ಬೆನ್ ಹೇಮ್‌ನ ನಕ್ಷತ್ರದ ನೆನಪನ್ನು ಜೀವಂತಗೊಳಿಸುತ್ತವೆ. ಅಲಂಕರಿಸಲಾದ ಕ್ರಿಸ್ಮಸ್ ಮರವು ಆಸೆ ಮತ್ತು ಹೊಸ ಜೀವನದ ಸಂಕೇತವಾಗಿ ನಿಂತಿದೆ.
ಸಾಂತಾ ಕ್ಲಾಸ್ ಮಕ್ಕಳ ಕನಸಿನ ಲೋಕದ ಪ್ರತಿನಿಧಿ. ಉಡುಗೊರೆಗಳಿಗಿಂತಲೂ, ಮಕ್ಕಳ ಮುಖದಲ್ಲಿನ ನಗು ಕ್ರಿಸ್ಮಸ್‌ನ ನಿಜವಾದ ಉಡುಗೊರೆಯಾಗುತ್ತದೆ. ಬಡವರ ಮನೆಗಳ ಬಾಗಿಲು ತಟ್ಟುವ ದಾನಧರ್ಮ, ಹಸಿದವರಿಗೆ ಆಹಾರ ನೀಡುವ ಮನೋಭಾವ-ಇವೆಲ್ಲವೂ ಕ್ರಿಸ್ಮಸ್‌ನ ಜೀವಂತ ರೂಪಗಳು.
ಕ್ರಿಸ್ಮಸ್ ಒಂದು ದಿನದ ಆಚರಣೆ ಅಲ್ಲ; ಅದು ಒಂದು ಜೀವನ ದರ್ಶನ. “ಪ್ರೀತಿ ಹಂಚಿದಷ್ಟೂ ಅದು ಹೆಚ್ಚುತ್ತದೆ” ಎಂಬ ಸತ್ಯವನ್ನು ಈ ಹಬ್ಬ ನಮಗೆ ಬೋಧಿಸುತ್ತದೆ. ಧರ್ಮ, ಜಾತಿ, ಭಾಷೆಗಳ ಗಡಿಗಳನ್ನು ದಾಟಿ ಮಾನವರೆಲ್ಲರೂ ಒಂದೇ ಕುಟುಂಬ ಎಂಬ ಭಾವನೆಯನ್ನು ಕ್ರಿಸ್ಮಸ್ ಉಣಬಡಿಸುತ್ತದೆ.
ಈ ಕ್ರಿಸ್ಮಸ್ ನಮ್ಮ ಹೃದಯಗಳಲ್ಲಿ ದ್ವೇಷದ ನೆರಳನ್ನು ದೂರ ಮಾಡಿ, ಪ್ರೀತಿಯ ಬೆಳಕನ್ನು ಶಾಶ್ವತವಾಗಿ ಮೂಡಿಸಲಿ. ಯಾಕೆಂದರೆ, ಹೃದಯಗಳನ್ನು ಬೆಳಗಿಸಿದಾಗಲೇ ಜಗತ್ತು ನಿಜವಾಗಿ ಬೆಳಗುತ್ತದೆ.
ಡಾ. ವಿದ್ಯಾಸರಸ್ವತಿ
ಕನ್ನಡಅತಿಥಿಉಪನ್ಯಾಸಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯನೂರು