ಕಾಲಚಕ್ರ ನಿರಂತರವಾಗಿ ತಿರುಗುತ್ತಲೇ ಇದೆ. ಒಂದು ವರ್ಷದ ಕೊನೆ, ಮತ್ತೊಂದು ವರ್ಷದ ಆರಂಭ-ಇವು ಕೇವಲ ದಿನಾಂಕಗಳ ಬದಲಾವಣೆಗಳಷ್ಟೇ ಅಲ್ಲ; ಅವು ಮಾನವ ಮನಸ್ಸಿನಲ್ಲೊಂದು ಹೊಸ ಆಶಾಭಾವನೆಯ ಮೊಳಕೆಯೊಡೆತ. ಹೊಸ ವರ್ಷವೆಂದರೆ ಹಳೆಯ ನೋವುಗಳಿಗೆ ವಿದಾಯ ಹೇಳಿ, ಹೊಸ ಕನಸುಗಳಿಗೆ ಸ್ವಾಗತಿಸುವ ಕ್ಷಣ.
ಹಿಂದಿನ ವರ್ಷ ನಮ್ಮ ಜೀವನದ ಪಾಠ ಪುಸ್ತಕದ ಒಂದು ಅಧ್ಯಾಯದಂತೆ. ಅದರಲ್ಲಿ ಸಂತೋಷದ ಸಾಲುಗಳಿವೆ, ನೋವಿನ ಪುಟಗಳಿವೆ, ಸೋಲಿನ ಮಸಿ ಗುರುತುಗಳಿವೆ, ಸಾಧನೆಯ ಹೊಳಪೂ ಇದೆ. ಆದರೆ ಹೊಸ ವರ್ಷವೆಂಬುದು ಖಾಲಿ ಪುಟ. ಅದನ್ನು ಹೇಗೆ ಬರೆಯಬೇಕು ಎಂಬುದು ನಮ್ಮ ಕೈಯಲ್ಲೇ ಇದೆ. ಸವಿ ಗನಸುಗಳು, ಶ್ರಮ, ಸಹನೆ ಮತ್ತು ಮಾನವೀಯತೆ-ಇವೇ ಆ ಪುಟವನ್ನು ಅರ್ಥಪೂರ್ಣವಾಗಿಸುವ ಅಕ್ಷರಗಳು.
ಹೊಸ ವರ್ಷ ನಮಗೆಲ್ಲ ಹರುಷ ತರಲಿ ಎಂದರೆ, ಅದು ಕೇವಲ ವೈಯಕ್ತಿಕ ಸಂತೋಷಕ್ಕಷ್ಟೇ ಸೀಮಿತವಾಗಿರಬಾರದು. ನಮ್ಮ ಸುತ್ತಲಿನವರ ಬದುಕಿಗೂ ಬೆಳಕು ಹರಡಬೇಕು. ಬಡವರ ಮುಖದಲ್ಲಿ ನಗು ಮೂಡಲಿ, ಹಸಿದವರಿಗೆ ಅನ್ನ ಸಿಗಲಿ, ನಿರಾಸೆ ಯಲ್ಲಿರುವವರಿಗೆ ಧೈರ್ಯದ ಮಾತು ದೊರಕಲಿ. ಸಮಾಜದ ಒಗ್ಗಟ್ಟಿನಲ್ಲಿ ವ್ಯಕ್ತಿಯ ನಿಜವಾದ ಸಂತೋಷ ಅಡಗಿದೆ.
ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವು ಎಷ್ಟೋ ದೂರ ಹೋಗಿದ್ದೇವೆ; ಆದರೆ ಹೃದಯದಿಂದ ಹೃದಯಕ್ಕೆ ಹತ್ತಿರವಾಗಿದ್ದೇವೆಯೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಹೊಸ ವರ್ಷ ನಮಗೆ ಮಾನವೀಯ ಮೌಲ್ಯಗಳನ್ನು ಮರುಪರಿಶೀಲಿಸುವ ಅವಕಾಶ ನೀಡಲಿ.
ಪ್ರೀತಿ, ಸಹಕಾರ, ಸಹಿಷ್ಣುತೆ ಮತ್ತು ಶಾಂತಿ-ಇವೇ ನಮ್ಮ ಬದುಕಿನ ನಿಜವಾದ ಸಂಭ್ರಮಗಳು.
ಹೊಸ ವರ್ಷವು ಕೇವಲ ಪಟಾಕಿ, ಶುಭಾಶಯ ಸಂದೇಶಗಳು ಮತ್ತು ಸಂಭ್ರಮಾಚರಣೆಗಳಿಗೆ ಸೀಮಿತವಾಗದೆ, ಬದುಕನ್ನು ಉತ್ತಮಗೊಳಿಸುವ ಸಂಕಲ್ಪದ ಆರಂಭವಾಗಲಿ. ಪ್ರತಿಯೊಬ್ಬರ ಬದುಕಲ್ಲೂ ಹೊಸ ಬೆಳಕು ಕಿರಣದ ರೂಪದಲಿ ಹೊಳೆಯಲಿ. ದುಃಖದ ಮೋಡಗಳು ಸರಿದು, ಸಂತಸದ ಸೂರ್ಯ ಉದಯಿಸಲಿ.
ಹೌದು, ಈ ಹೊಸ ವರ್ಷ ನಮಗೆಲ್ಲ ಹರುಷ ತರಲಿ-ಮನಸ್ಸಿಗೆ ಶಾಂತಿ, ಬದುಕಿಗೆ ಅರ್ಥ ಮತ್ತು ಸಮಾಜಕ್ಕೆ ಬೆಳಕು ನೀಡುವಂತಹ ವರುಷವಾಗಲಿ
ಡಾ. ವಿದ್ಯಾಸರಸ್ವತಿ
ಕನ್ನಡ ಅತಿಥಿ ಉಪನ್ಯಾಸಕರು
ಸ. ಪ್ರ. ದರ್ಜೆ ಕಾಲೇಜು ಆಯನೂರು