ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ರಂಗಭೂಮಿ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ರೂಪಿಸುವ ಮಹತ್ವದ ಕಲೆಯಾಗಿದ್ದು, ಜನಸಾಮಾನ್ಯರಿಗೆ ಉತ್ತಮ ಸಂದೇಶ ಸಾರಲು ಬಹುದೊಡ್ಡ ಮಾಧ್ಯಮವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು.

ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್ಇಎಸ್ ಹವ್ಯಾಸಿ ರಂಗವೇದಿಕೆಯ ವತಿಯಿಂದ ಗುರುವಾರ ಸಂಜೆ ಎಸ್.ಆರ್.ಎನ್.ಎಂ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಭಿನ್ನ ಪ್ರಕಾರಗಳು ಒಂದೆಡೆ ಸೇರಿ ಪ್ರದರ್ಶನಗೊಳ್ಳುವಂತಹ ವಿಶೇಷತೆ ನಾಟಕದ ಮೂಲಕ ಸಾಧ್ಯ. ಕಲೆಯು ಜೀವಂತವಾಗಿರಬೇಕು ಎಂಬುದು ಅತ್ಯಂತ ಮುಖ್ಯ. ನಾಟಕದಲ್ಲಿ ಜೀವಂತಿಕೆ ಇದ್ದಾಗ ಮಾತ್ರ ಅದು ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತದೆ. ಕಲೆ ಎಂದರೆ ಜನರ ಬದುಕಿನ ಪ್ರತಿಬಿಂಬವಾಗಿರಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸಲು, ಸಮಸ್ಯೆಗಳ ಬಗ್ಗೆ ಚಿಂತನೆಗೆ ಪ್ರೇರೇಪಿಸಲು ನಾಟಕ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಖ್ಯಾತ ರಂಗಕರ್ಮಿ ಬಿ.ಆರ್.ರೇಣುಕಪ್ಪ ಮಾತನಾಡಿ, ರಂಗದಲ್ಲಿ ಮನರಂಜನೆಯ ಜೊತೆಗೆ ಸಂದೇಶ ಸಾರುವತ್ತ ಹೆಚ್ಚು ಗಮನವಹಿಸಬೇಕು. ನಾಟಕದ ಸಂದೇಶಗಳು ಅನೇಕ ಜನ ಸಾಮಾನ್ಯರ ಬದುಕನ್ನು ಬದಲಿಸಿದೆ. ಬಿಇಡ್ ವಿದ್ಯಾರ್ಥಿಗಳು ರಂಗಚಟುವಟಿಕೆಗಳಲ್ಲಿ ಸಕ್ರಿಯರಾಗುವ ಮೂಲಕ, ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತಲುಪಬಹುದು‌ ಎಂದು ಹೇಳಿದರು‌.

ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ, ರಂಗಭೂಮಿ ಎಂಬುದು ಮನಸ್ಸುಗಳ ಕಟ್ಟುವ ಕಲೆ. ಇಲ್ಲಿ ನಟನೆಯ ನೇರ ಅನುಷ್ಟಾನವು ವೇದಿಕೆಯ ಮೇಲೆ ನಡೆಯುತ್ತದೆ. ದೇಶದ ಅಭಿವೃದ್ಧಿಯಲ್ಲಿ ಸಂಸ್ಕೃತಿ ಕಲೆ ಎಂಬುದು ಬಹುದೊಡ್ಡ ಆಧಾರ‌ವಾಗಿ ನಿಂತಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು‌. ಇದೇ ವೇಳೆ ಖ್ಯಾತ ಯಕ್ಷಗಾನ ಕಲಾವಿದ ಪರಮೇಶ್ವರ ಹೆಗಡೆ ಐನಬೈಲು ಹಾಗೂ ಖ್ಯಾತ ರಂಗಕರ್ಮಿ ಬಿ.ಆರ್.ರೇಣುಕಪ್ಪ ಅವರನ್ನು ಅಭಿನಂದಿಸಲಾಯಿತು.

ಚಿತ್ರ: ಖ್ಯಾತ ರಂಗಕರ್ಮಿ ಬಿ.ಆರ್.ರೇಣುಕಪ್ಪ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *