ಮಂಜುನಾಥ್ ಶೆಟ್ಟಿ…

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವರಿಗೆ ವಿಶಿಷ್ಟ ಹಕ್ಕುಗಳಿವೆ. ಅವರುಗಳ ಆರೋಗ್ಯ, ಆಸ್ತಿ ರಕ್ಷಣೆ ಮಾಡಿಕೊಳ್ಳಲು ಕಾನೂನಿನ ಸೇವೆಗಳಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ.ಎ. ತಿಳಿಸಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಹಾಗೂ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ಸಿಮ್ಸ್ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಕಚೇರಿಯಲ್ಲಿ ತೆರೆಯಲಾಗಿರುವ ಉಚಿತ ಕಾನೂನು ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ಮಾನಸಿಕ ಅಸ್ವಸ್ಥತೆಗೆ ಒಳಗಾದ ವ್ಯಕ್ತಿಗಳ ವೈದ್ಯಕೀಯ, ಆರೋಗ್ಯ, ಆಸ್ತಿ ರಕ್ಷಣೆಯ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಡಿ ಸಹಾಯ ಲಭ್ಯವಿದ್ದು, ಅದರ ಸದ್ಭಳಕೆ ಪಡೆದುಕೊಳ್ಳಬೇಕು. ಹಾಗೂ ಯಾರೇ ಆಗಲಿ ತಾವು ಮಾಡುವ ಕೆಲಸವನ್ನು ಶ್ರದ್ದೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಕರೆ ನೀಡಿದರು.


ಸಿಮ್ಸ್ ನಿರ್ದೇಶಕರಾದ ಡಾ.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಕಚೇರಿಯಲ್ಲಿ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಿರುವುದು ಬಹಳ ಉಪಯುಕ್ತವಾಗಿದ್ದು, ಇಂತಹ ಕಾರ್ಯಕ್ರಮಗಳ ಮಾಹಿತಿಯು ಎಲ್ಲಾ ಜನರಿಗೆ ತಲುಪಬೇಕು ಹಾಗೂ ಅಗತ್ಯವಿದ್ದವರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರಾದ ಸಂತೋಷ್ ಎಂ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರಿಗೆ ಕಾನೂನು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಿಡಿಪಿಓ ಕಚೇರಿ, ಮೆಗ್ಗಾನ್ ಆಸ್ಪತ್ರೆಯ ಎಆರ್‌ಟಿ ಕ್ಲಿನಿಕ್, ಬಾಲ ನ್ಯಾಯ ಮಂಡಳಿ, ಜಿಲ್ಲಾ ಸೈನಿಕ್ ಬೋರ್ಡ್, ಹಿರಿಯ ನಾಗರಿಕರ ಸಹಾಯವಾಣಿ, ಕೇಂದ್ರ ಕಾರಾಗೃಹ ಹಾಗೂ ಮಹಿಳಾ ಕೇಂದ್ರ ಕಾರಾಗೃಹ ಹಾಗೂ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನುರಿತ ವಕೀಲರನ್ನು ಕಾನೂನು ಸಲಹಾ ಕೇಂದ್ರಗಳಿಗೆ ನಿಯೋಜಿಸಲಾಗಿದ್ದು, ಇವರ ಸೇವೆಯನ್ನು ಪಡೆಯಬಹುದು.


ಅಲ್ಲದೆ ಮಕ್ಕಳು ಕಾಣೆಯಾದ ಬಗ್ಗೆ ದೂರು ನೀಡಲು ಬಂದವರಿಗೆ ಹಾಗೂ ಮಹಿಳೆಯರಿಗೆ ಹಾಗೂ ಕಾನೂನು ನೆರವನ್ನು ಬಯಸುವ ಬಂಧಿತರಾದ ಆರೋಪಿಗಳಿಗೆ ಕಾನೂನು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಲು ದೊಡ್ಡಪೇಟೆ ಪೊಲೀಸ್ ಠಾಣೆ, ತುಂಗಾನಗರ ಪೊಲೀಸ್ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ತಲಾ ಒಬ್ಬ ಅರೆಕಾಲಿಕ ಕಾನೂನು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.


ಮಾನಸಿಕ ಅಸ್ವಸ್ಥರಿಗೆ ಉಚಿತ ಕಾನೂನಿನ ನೆರವು ನೀಡಲು ಹಾಗೂ ಘನತೆಯಿಂದ ಬದುಕಲು ನಮ್ಮ ಪ್ರಾಧಿಕಾರವು ಉಚಿತವಾಗಿ ವಕೀಲರನ್ನು ನೇಮಿಸಿದ್ದು, ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 15100 ಗೆ ಕರೆ ಮಾಡಿ ಉಚಿತ ಕಾನೂನಿನ ಸಲಹೆ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ತಿಮ್ಮಪ್ಪ ಟಿ.ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಗೀತಾ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ರಾಮ್ ಪ್ರಸಾದ್, ಶುಶ್ರೂಷಕಾಧೀಕ್ಷಕಿ ಶೇಷಮ್ಮ, ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಸದಸ್ಯರಾದ ರಜನಿ ಪೈ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಸದಸ್ಯರಾದ ಶುಭ್ರತ, ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *