ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದಲ್ಲಿನ ಶಾಲಾ ಮತ್ತು ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಡೊನೇಷನ್ ಹಾಗೂ ಅತಿಯಾದ ಶುಲ್ಕದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಶಿವಮೊಗ್ಗ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಸಂಘಟನೆಯ ಪ್ರಕಾರ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳು ಜನರಿಗೆ ಉಚಿತವಾಗಿ ದೊರಕುವ ರಾಜ್ಯಗಳಲ್ಲಿ ಜನಪರ ಆಡಳಿತವಿದೆ ಎನ್ನಬಹುದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಅತಿಯಾದ ಶುಲ್ಕ ಮತ್ತು ಡೊನೇಷನ್ ಮೂಲಕ ಜನರಿಂದ ಸುಲಿಗೆ ನಡೆಯುತ್ತಿರುವುದು ಸರ್ಕಾರದ ಜನವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ಆರೋಪಿಸಲಾಗಿದೆ.

ಶಿವಮೊಗ್ಗದಲ್ಲಿನ ಅನೇಕ ಖಾಸಗಿ ಶಾಲಾ-ಕಾಲೇಜುಗಳು ಅತೀ ಹೆಚ್ಚು ಶುಲ್ಕ ವಸೂಲಿಸುತ್ತಿದ್ದರೂ, ಇದುವರೆಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಅನುಮಾನಾಸ್ಪದವಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯ ತಿಳಿದಿದ್ದರೂ ಮೌನ ವಹಿಸಿರುವುದು ಪ್ರಶ್ನಾರ್ಥಕವಾಗಿದೆ ಎಂದು ಸಂಘಟನೆ ತಿಳಿಸಿದೆ.

ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಉಲ್ಲೇಖಿಸಿದ ಸಂಘಟನೆ, ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದೆ. ಇದರಿಂದ ಶ್ರೀಮಂತರ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಬಡ ಮಕ್ಕಳಿಗೆ ಸಮಾನ ಸ್ಪರ್ಧೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಂಡ ನಂತರ ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡುತ್ತಿರುವುದು ದುಃಖಕರ ಸಂಗತಿ ಎಂದು ಸಂಘಟನೆ ಹೇಳಿದೆ. 1ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದೆ.

ಈ ಹಿನ್ನೆಲೆಯಲ್ಲಿ, ತಕ್ಷಣವೇ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಅತಿಯಾದ ಶುಲ್ಕ ವಸೂಲಿಯನ್ನು ನಿಲ್ಲಿಸಿ, ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮುಂದೆ ಕೂಡ ಹೆಚ್ಚಿನ ಶುಲ್ಕ ವಸೂಲಿಯ ಬಗ್ಗೆ ಮಾಹಿತಿ ಲಭ್ಯವಾದರೆ, ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ವಿರುದ್ಧ ಮುತ್ತಿಗೆ ಹಮ್ಮಿಕೊಳ್ಳುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.


ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಸಂಸ್ಥಾಪಕರಾಧ್ಯಕ್ಷರಾದ ಡಾ. ಎಚ್ ಸುರೇಶ್ ರವರು. ಗೌರವಾಧ್ಯಕ್ಷರಾದ ಮೂರ್ತಿ ವಿ. ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ. ಜಿಲ್ಲಾ ಕಾರ್ಯ ಅಧ್ಯಕ್ಷ ಜೀವನ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ಬಿ. ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ಮಲ್ಲಿಗೇನಹಳ್ಳಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗದೀಶ್ ವೈಎಸ್ ಪತ್ರಿಕೆ ಸಲಹೆಗಾರರಾದ ಮಾಲತೇಶ್. ರಾಮಣ್ಣ ರಾಗಿಗುಡ್ಡ. ಕುಮಾರ್. ಗಣೇಶ್. ಪಂಚಾಕ್ಷರಿ. ಶಿವಣ್ಣ. ರಾಮು,ವಿ ಸಂಗಮೇಶ್, ಪ್ರತಾಪ್, ಮಹಿಳಾ ಘಟಕದ ಉಪಾಧ್ಯಕ್ಷರಾದ ಅನ್ನಪೂರ್ಣ. ಕೃಷ್ಣವೇಣಿ. ಅನಿತಾ ರಾಜನ್. ಶಿಲ್ಪ ಇನ್ನು ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *