ಮಂಜುನಾಥ್ ಶೆಟ್ಟಿ…
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ’ ದಲ್ಲಿ ಜೀರುಂಡೆ ಪುಸ್ತಕ ಪ್ರಕಾಶನದ ವತಿಯಿಂದ ಇಂದು ಆಯೋಜಿಸಲಾಗಿದ್ದ ‘ಶೂದ್ರ ಬಂಡಾಯ’ ಕೃತಿಯ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಬಂಗಾರಪ್ಪ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣವೇ ಪ್ರಬಲ ಅಸ್ತ್ರ. ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ಶೂದ್ರ ಬಂಡಾಯದಂತಹ ಕೃತಿಗಳು ಓದುಗರಲ್ಲಿ ವೈಚಾರಿಕ ಕ್ರಾಂತಿಯನ್ನುಂಟು ಮಾಡುತ್ತವೆ. ಸರ್ಕಾರವು ಸರ್ವರಿಗೂ ಸಮಾನ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇಂತಹ ಸಾಮಾಜಿಕ ಕಳಕಳಿಯ ಕೃತಿಗಳು ನಮ್ಮ ಆಲೋಚನೆಗಳಿಗೆ ಬಲ ತುಂಬುತ್ತವೆ. ಈ ಸಂದರ್ಭದಲ್ಲಿ ತಮ್ಮ ತಂದೆ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಪ್ರತಿದಿನ ಮಕ್ಕಳಿಗೆ ಒಂದು ರೂಪಾಯಿ ಕೊಡುವ ಪದ್ಧತಿಯನ್ನು ಸ್ಮರಿಸಿದರು. ಈ ಬಾರಿ ದ್ವೀಭಾಷಾ ಪದ್ಧತಿ ಜಾರಿಗೆ ತಂದು ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಸವಲತ್ತು ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಒಂದು ಹೊಸ ಯುಗ ಪ್ರಾರಂಭಿಸಲಾಗುವುದುಎಂದರು.
ಭಾರತದ ಪ್ರಖ್ಯಾತ ಚಿಂತಕರಾದ ಶ್ರೀ ಕಂಚ ಐಲಯ್ಯ ಶೆಫರ್ಡ್ ಅವರು ಭಾರತೀಯ ಸಮಾಜದಲ್ಲಿ ಶೂದ್ರ ಸಮುದಾಯಗಳ ಐತಿಹಾಸಿಕ ಹಿನ್ನೆಲೆ, ಅವರ ಶ್ರಮ, ಸಂಸ್ಕೃತಿ ಮತ್ತು ಅವರು ಎದುರಿಸುತ್ತಿರುವ ಸಾಮಾಜಿಕ ಸವಾಲುಗಳ ಕುರಿತು ಈ ಕೃತಿಯಲ್ಲಿ ಆಳವಾಗಿ ವಿಶ್ಲೇಷಿಸಿದ್ದಾರೆ. ಜೊತೆಗೆ ಜಾತಿ ಪದ್ಧತಿಯ ಬೇರುಗಳನ್ನು ಗುರುತಿಸುತ್ತಾ, ಸಾಮಾಜಿಕ ಸಮಾನತೆಯನ್ನು ಸಾಧಿಸಲು ಶೂದ್ರ ಸಮುದಾಯಗಳು ಒಗ್ಗೂಡಿ ನಡೆಸಬೇಕಾದ ಬೌದ್ಧಿಕ ಮತ್ತು ಸಾಂಸ್ಕೃತಿಕ ಹೋರಾಟದ ಅಗತ್ಯವನ್ನು ಇಲ್ಲಿ ಒತ್ತಿಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ರಾಜಕೀಯ ವಿಶ್ಲೇಷಕ ಮತ್ತು ಪ್ರಾಧ್ಯಾಪಕರಾದ ಶ್ರೀ ಎ. ನಾರಾಯಣರವರು, ಕವಯಿತ್ರಿ ಶ್ರೀಮತಿ ಭಾರತಿ ದೇವಿಯವರು, ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಶ್ರೀಮತಿ ಜಯಲಕ್ಷ್ಮಿ ಮತ್ತು ಪ್ರಕಾಶಕರಾದ ಶ್ರೀ ಧನಂಜಯ ಎನ್ ಸೇರಿದಂತೆ ನೂರಾರು ಸಾಹಿತ್ಯಾಭಿಮಾನಿಗಳು, ಚಿಂತಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.