ಮಂಜುನಾಥ ಶೆಟ್ಟಿ…

ಸೋಷಿಯಲ್ ಮೀಡಿಯಾದಲ್ಲಿ ದುರುಪಯೋಗ ಹೆಚ್ಚಾಗತೊಡಗಿದ್ದು, ಸಮಾಜದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ನಿಯಂತ್ರಿಸುವ ಮಟ್ಟಕ್ಕೆ ಸೋಷಿಯಲ್ ಮೀಡಿಯ ಹೋಗಿದೆ. ಸೋಷಿಯಲ್ ಮೀಡಿಯಾ ಬಂದ ಮೇಲೆ ಎಲ್ಲರೂ ಪತ್ರಕರ್ತರಾಗಿದ್ದಾರೆ. ಅವರೆಲ್ಲರೂ ಜವಾಬ್ದಾರಿಯುತ ಪತ್ರಕರ್ತರಲ್ಲ ಎಂದು ವಿಜಯ ಕರ್ನಾಟಕ ಪತ್ರಿಕೆ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಿಂದ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತು ವರದಿ ಮಾಡುವವರೇ ಪತ್ರಕರ್ತರು ಎಂದ ಅವರು, ಪ್ರಪಂಚದ ಮೂಲೆಯಲ್ಲಿ ಏನೇ ಘಟನೆ ನಡೆದರೂ ಅಂಗೈನಲ್ಲಿ ನೋಡುವ ಅವಕಾಶವನ್ನು ಡಿಜಿಟಲ್ ಮಾಧ್ಯಮ ಒದಗಿಸಿಕೊಟ್ಟಿದೆ. ಆದರೆ ದುರುಪಯೋಗ ಹೆಚ್ಚಿದೆ, ಡಿಜಿಟಲ್ ಕ್ರಾಂತಿಯ ನಡುವೆ ಪತ್ರಿಕೆಗಳು ಇಂದಿಗೂ ವಿಶ್ವಾಸ ಉಳಿಸಿಕೊಂಡಿವೆ ಎಂದರು.

ಪತ್ರಕರ್ತರ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಜನಸಾಮಾನ್ಯರ ಧ್ವನಿಯಾಗಿ ನಾವು ಕೆಲಸ ಮಾಡಬೇಕು. ಯುವ ಪತ್ರಕರ್ತರಲ್ಲಿ ಕಲಿಕಾ ಮಟ್ಟ ಕುಸಿದಿದೆ. ಪ್ರಜ್ಞಾವಂತ ಪತ್ರಕರ್ತರ ಸಂಖ್ಯೆ ಕಡಿಮೆಯಾಗಿದೆ. ಓದುವ, ಕಲಿಯುವ ಆಸಕ್ತಿ ಯುವ ಪತ್ರಕರ್ತರಲ್ಲಿ ಕುಂದಿದೆ. ಅವಕಾಶಕ್ಕೆ ತಕ್ಕಂತೆ ಪತ್ರಕರ್ತರು ಬದಲಾವಣೆ ಮಾಡಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು. ಎ.ಐ ಎಲ್ಲಾ ಕ್ಷೇತ್ರವನ್ನು ಆವರಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಕಳೆದುಕೊಳ್ಳಲಿದ್ದಾರೆ. ಇದಕ್ಕೆ ಮಾಧ್ಯಮ ಕ್ಷೇತ್ರ ಹೊರತಾಗಿಲ್ಲ. ಹೊಸತನಕ್ಕೆ ತೆರೆದುಕೊಂಡರೆ ಎಲ್ಲರಿಗೂ ಅವಕಾಶಗಳು ಇದ್ದೇ ಇರುತ್ತವೆ. ಕೌಶಲ್ಯವನ್ನು ಎಲ್ಲರೂ ಕರಗತ ಮಾಡಿಕೊಳ್ಳಬೇಕು ಎಂದರು.

ಸರ್ಕಾರಿ ನೌಕರರ ಸಂಘ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ರಾಜ್ಯದಲ್ಲಿ ಮಾದರಿಯಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಟ್ರಸ್ಟ್ ನಲ್ಲಿ ಅತಿಥಿ ಗೃಹ ಮಾಡುವುದಾದರೆ ಅನುದಾನ ಕೊಡಿಸುವ ಜವಾಬ್ದಾರಿ ನಮ್ಮದು ಎಂದ ಅವರು, ಪ್ರಜಾಪ್ರಭುತ್ವದ ಜೀವಾಳವಾಗಿ ಪತ್ರಿಕಾರಂಗ ಕಾರ್ಯ ನಿರ್ವಹಿಸುತ್ತಿದೆ. ಸೋಷಿಯಲ್ ಮೀಡಿಯಾವನ್ನು ಇಂದು ನಿಯಂತ್ರಿಸುವ ಅವಶ್ಯಕತೆ ಇದೆ. ವಸ್ತುನಿಷ್ಠ ವರದಿ ಮಾಡುವ ಅಗತ್ಯತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಕಂಡಂತೆ ೪೨ ವರ್ಷದಲ್ಲಿ ಪತ್ರಿಕೋದ್ಯಮ ಸವಿಸ್ತಾರವಾಗಿ ವಿಕಸನಗೊಂಡಿದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಸ್ತುನಿಷ್ಠ ಸುದ್ದಿಕೊಡುವ ಪತ್ರಿಕೆಗಳು ಇಂದಿಗೂ ಮಾಧ್ಯಮ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿದಿವೆ ಎಂದು ವಿವರಿಸಿದರು. ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಸಜ್ಜನ, ಪ್ರತಿಭಾವಂತ ಪತ್ರಕರ್ತರು ಇದಾರೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ. ಮಹನೀಯರು ಪತ್ರಿಕೋದ್ಯಮದಲ್ಲಿ ದುಡಿದು ಹೋಗಿದ್ದಾರೆ. ಸುಪ್ರೀಂನ ಇಬ್ಬರು ನ್ಯಾಯಾಧೀಶರು ಸಹ ಪ್ರೆಸ್ ಟ್ರಸ್ಟ್ ನೋಡಿ ಮೆಚ್ಚಿಕೊಂಡಿದ್ದಾರೆ. ಸೇವಾ ಅವಧಿ, ಹಿರಿತನ ಗುರುತಿಸಿ ಪ್ರಶಸ್ತಿ ನೋಡಿ ಗೌರವಿಸುವ ಕೆಲಸವನ್ನು ಮಾಡಿದ್ದೇವೆ ಎಂದರು.

ಸಾಧಕರಿಗೆ ಸನ್ಮಾನ…

ವಾರ್ತಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಬಿ.ಎಸ್.ತಿಮ್ಮೋಲಿ, ತುಂಗಾತರಂಗ ಪತ್ರಿಕೆಯ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ, ದಿ ಹಿಂದೂ ಪತ್ರಿಕೆಯ ಛಾಯಾಗ್ರಾಹಕ ಎಸ್.ಕೆ.ದಿನೇಶ್, ಹೊಸದಿಂಗಂತ ಪತ್ರಿಯ ಮುದ್ರಣ ವಿಭಾಗದಿಂದ ರಾಘವೇಂದ್ರ, ವಿಜಯ ಕರ್ನಾಟಕ ಪತ್ರಿಕೆ ( ಹಣಕಾಸು ವಿಭಾಗ) ಸಹಾಯಕ ವ್ಯವಸ್ಥಾಪಕ ಟಿ.ಸಿ.ಮಂಜುನಾಥ್, ಸುವರ್ಣ ನ್ಯೂಸ್ ಹಿರಿಯ ವರದಿಗಾರರಾದ ರಾಜೇಶ್ ಕಾಮತ್, ನ್ಯೂಸ್ ಫಸ್ಟ್ ಸೀನಿಯರ್ ವಿಡಿಯೋ ಜರ್ನಲಿಸ್ಟ್ ಕೆ.ಎ.ಮಹೇಶ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸೀನಿಯರ್ ಮ್ಯಾನೇಜರ್ (ಮಾರ್ಕೆಟಿಂಗ್) ಡಿ.ಕೆ.ಕಾರ್ತಿಕ್, ಶಿವಮೊಗ್ಗ ಟೈಮ್ಸ್ ಪತ್ರಿಕೆ ಡಿಸೈನರ್ ಎಸ್.ಪಿ. ಶೋಭಾ, ಪತ್ರಿಕಾ ವಿತರಕ ವಿಭಾಗದ ಡಿ. ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರೆಸ್‌ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಅವರು ಸ್ವಾಗತಿಸಿದರು. ಮೋಹನ್ ಕೃಷ್ಣ ನಿರೂಪಿಸಿದರು. ಸೌಮ್ಯ ಪ್ರಾರ್ಥಿಸಿದರು. ಕಿರಣ್ ಕಂಕಾರಿ ವಂದಿಸಿದರು.

Leave a Reply

Your email address will not be published. Required fields are marked *