ಮಂಜುನಾಥ ಶೆಟ್ಟಿ…

ಶಿವಮೊಗ್ಗ ನಗರದ ಕೈಗಾರಿಕಾ ಪ್ರಗತಿಯು ನಮ್ಮ ಜಿಲ್ಲೆಯ ಆರ್ಥಿಕ ಬೆಳವಣಿಗೆಯ ದಿಕ್ಸೂಚಿಯಾಗಿದೆ. ಇಲ್ಲಿನ ಉದ್ಯಮಿಗಳು ಮತ್ತು ಕಾರ್ಮಿಕರು ಎದುರಿಸುತ್ತಿರುವ ವಿದ್ಯುತ್ ಸೇರಿದಂತೆ ಯಾವುದೇ ನಾಗರಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸುವುದು ನಮ್ಮ ಆದ್ಯ ಕರ್ತವ್ಯ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.
ಶಾಸಕರ ಅಧಿಕೃತ ಕಚೇರಿಯಾದ ‘ಕರ್ತವ್ಯ ಭವನ’ದಲ್ಲಿ ಮಾಚೇನಹಳ್ಳಿ ಕೈಗಾರಿಕಾ ಘಟಕದ ನಿಯೋಗದೊಂದಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಗಾಗ ಉಂಟಾಗುತ್ತಿರುವ ವಿದ್ಯುತ್ ಹಾಗೂ ತಾಂತ್ರಿಕ ಅಡಚಣೆಗಳಿಂದ ಉದ್ಯಮಗಳಿಗೆ ಆಗುತ್ತಿರುವ ನಷ್ಟದ ಕುರಿತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಮನವಿ ಆಲಿಸಿದ ಶಾಸಕರು, ಸ್ಥಳದಲ್ಲೇ ಮೆಸ್ಕಾಂ (MESCOM) ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ, ಕೈಗಾರಿಕಾ ವಲಯಕ್ಕೆ ಯಾವುದೇ ಅಡೆತಡೆಯಿಲ್ಲದೆ ವಿದ್ಯುತ್ ಪೂರೈಸಲು ಅಗತ್ಯವಿರುವ ತಾಂತ್ರಿಕ ನವೀಕರಣಗಳನ್ನು ತಕ್ಷಣವೇ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡರು, ಮಾಚೇನಹಳ್ಳಿ ಕೈಗಾರಿಕಾ ಘಟಕ ಸಂಘದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.