ಮಂಜುನಾಥ ಶೆಟ್ಟಿ…

ಶಿವಮೊಗ್ಗ ನಗರದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುವ ಬದಲು, ಕನ್ಸರ್‌ವೆನ್ಸಿ ರಸ್ತೆಗಳಲ್ಲಿ ಫುಡ್ ಕೋರ್ಟ್ ಮಾದರಿಯ ವ್ಯವಸ್ಥಿತ ವ್ಯಾಪಾರ ಸ್ಥಳಗಳನ್ನು ನಿರ್ಮಿಸಿ ನಂತರವೇ ಸ್ಥಳಾಂತರಗೊಳಿಸಬೇಕು ಎಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ (ರಿ) ಆಗ್ರಹಿಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ಹಾಗೂ ಟ್ರಾಫಿಕ್ ಸಿಪಿಐ ದೇವರಾಜ್ ಅವರಿಗೆ ಮನವಿ ಸಲ್ಲಿಸಿರುವ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸತೀಶ್ ಎಚ್., ಶಿವಮೊಗ್ಗ ನಗರದಲ್ಲಿ ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸುವ ಸಾವಿರಾರು ಕುಟುಂಬಗಳು ಇದೇ ಉದ್ಯೋಗವನ್ನು ಅವಲಂಬಿಸಿ ಜೀವನ ಸಾಗಿಸುತ್ತಿವೆ. ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ ಹಾಗೂ ಔಷಧೋಪಚಾರ ಸೇರಿದಂತೆ ದಿನನಿತ್ಯದ ಅಗತ್ಯಗಳನ್ನು ಈ ವ್ಯಾಪಾರದ ಮೂಲಕವೇ ಪೂರೈಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ವ್ಯಾಪಾರಿಗಳನ್ನು ತೆರವುಗೊಳಿಸುವುದು ಅವರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ವ್ಯಾಪಾರಕ್ಕಾಗಿ ಸಾಲ ಪಡೆದಿರುವ ಅನೇಕರು, ವ್ಯಾಪಾರ ಸ್ಥಗಿತಗೊಂಡರೆ ಸಾಲ ಮರುಪಾವತಿ ಮಾಡಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಲಿದೆ. ಜೊತೆಗೆ, ವ್ಯಾಪಾರಿಗಳಿಗೆ ತೋರಿಸಿರುವ ಕೆಲವು ಕನ್ಸರ್‌ವೆನ್ಸಿ ರಸ್ತೆಗಳ ಸ್ಥಳಗಳಲ್ಲಿ ಸ್ವಚ್ಛತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ವ್ಯಾಪಾರ ನಡೆಸುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ.

ಕನ್ಸರ್‌ವೆನ್ಸಿ ರಸ್ತೆಗಳಲ್ಲಿ ಫುಡ್ ಕೋರ್ಟ್ ಮಾದರಿಯಲ್ಲಿ ಕಟ್ಟೆ, ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವ್ಯವಸ್ಥಿತ ವ್ಯಾಪಾರ ವಲಯಗಳನ್ನು ನಿರ್ಮಿಸಬೇಕು. ಬಳಿಕ ಮಾತ್ರ ಬೀದಿಬದಿ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *