ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಲು ಪ್ರೇರೆಪಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ವಿದ್ಯಾಸೇತು ಸೇರಿದಂತೆ ನಿರಂತರವಾಗಿ ಶೈಕ್ಷಣಿಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚoದ್ರಮೂರ್ತಿ ಹೇಳಿದರು.
ಶಿವಮೊಗ್ಗದ ಎಲ್‌ಬಿಎಸ್ ನಗರದಲ್ಲಿರುವ ರೋಟರಿ ಕ್ಲಬ್ ಶಿವಮೊಗ್ಗ ಯೂತ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಿದ್ದ “ವಿದ್ಯಾಸೇತು – ವಿದ್ಯಾ ಅಭಿಯಾನ” ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೀಗ ಎಸ್‌ಎಸ್‌ಎಲ್‌ಸಿ ಮಕ್ಕಳ ಕಲಿಕೆಗೆ ಉಪಯುಕ್ತವಾಗುವಂತೆ ಪರಿಣಿತ ಶಿಕ್ಷಕರು ಸಿದ್ದಪಡಿಸಿರುವ ವಿದ್ಯಾಸೇತು ಮಾರ್ಗದರ್ಶಿ ಕೈಪಿಡಿಯನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸುವ ಅಭಿಯಾನ ನಡೆಸಲಾಗುತ್ತಿದೆ. ಇದರಿಂದ ಸರ್ಕಾರು ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ರಾಜ್ಯದ ಐದು ರೋಟರಿ ಜಿಲ್ಲೆಗಳ ಎಲ್ಲ ಕ್ಲಬ್‌ಗಳು ಒಟ್ಟುಗೂಡಿ ಹತ್ತನೇ ತರಗತಿ ಮಕ್ಕಳಿಗೆ ಉಪಯುಕ್ತ ಆಗುವ ಪಠ್ಯ ವಸ್ತು ಕೈಪಿಡಿ ಸಿದ್ಧಪಡಿಸಲಾಗಿದೆ. ಈವರೆಗೂ 17 ಸಾವಿರ ಪುಸ್ತಕ ವಿತರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ 12 ಶಾಲೆಯ 500ಕ್ಕೂ ಹೆಚ್ಚು ಮಕ್ಕಳಿಗೆ ಕಾರ್ಯಕ್ರಮದಲ್ಲಿ ಪುಸ್ತಕ ವಿತರಿಸಲಾಗುತ್ತಿದೆ ಎಂದರು.
ರೋಟರಿ ಇಂಡಿಯಾ ಸಾಕ್ಷರತಾ ಮಿಷನ್ ಜಿಲ್ಲಾ ಚರ‍್ಮನ್ ಕೆ.ಎಸ್.ಸುಬ್ರಹ್ಮಣ್ಯ ಬಸ್ರಿ ಮಾತನಾಡಿ, ಮಕ್ಕಳು ದೇಶದ ಸಂಪತ್ತು ಆಗಿದ್ದು, ಕರೋನಾ ಸೋಂಕು ವ್ಯಾಪಿಸಿದ ಪರಿಣಾಮ ಮಕ್ಕಳಿಗೆ ಎರಡು ವರ್ಷಗಳ ಕಾಲ ಸೂಕ್ತ ರೀತಿಯಲ್ಲಿ ಶಿಕ್ಷಣ ನೀಡಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ಕಲಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಡಿಡಿಪಿಐ ಎನ್.ಎಂ.ರಮೇಶ್ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುವಂತೆ ಪೂರಕ ಕಾರ್ಯಗಳನ್ನು ರೋಟರಿ ಸಂಸ್ಥೆಯು ನಡೆಸುತ್ತಿರುವುದು ಅಭಿನಂದನೀಯ. ಕರೊನಾ ಅವಧಿಯಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ವ್ಯವಸ್ಥೆ ಸರಿದೂಗಿಸಲು ವರ್ಷಗಳೇ ಬೇಕಾಗುತ್ತದೆ. ರೋಟರಿ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಸಹಕಾರಿ ಆಗುವಂತೆ ಅಗತ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸರ್ಕಾರಿ ಶಾಲೆ ಮಕ್ಕಳ ಉತ್ತಮ ಭವಿಷ್ಯಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷ ಕಿಶೋರ್ ಶರ‍್ನಾಳಿ ಅಧ್ಯಕ್ಷತೆ ವಹಿಸಿದ್ದರು. ವಲಯ 10ರ ಸಹಾಯಕ ಗವರ್ನರ್ ಆನಂದಮೂರ್ತಿ, ಜಿಲ್ಲಾ ಯೋಜನಾ ನಿರ್ದೇಶಕ ವೀರಣ್ಣ ಎ.ಹುಗ್ಗಿ, ರೋಟರಿ ಕ್ಲಬ್ ಶಿವಮೊಗ್ಗ ಕಾರ್ಯದರ್ಶಿ ಆರ್.ಆನಂದ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ರವೀಂದ್ರನಾಥ್ ಐತಾಳ್, ವಲಯ ಸೇನಾನಿ ಕೆ.ಪಿ.ಶೆಟ್ಟಿ, ಸುನೀತಾ ಶ್ರೀಧರ್ ಮತ್ತು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153