ಮಂಜುನಾಥ ಶೆಟ್ಟಿ…

ಶಿವಮೊಗ್ಗ: ಅಧ್ಯಯನವಿಲ್ಲದ ಅಧ್ಯಾಪನ ಅರ್ಥಹೀನವಾಗಿದ್ದು, ಪರಿವರ್ತನೆಯ ಯುಗದಲ್ಲಿ ಶಿಕ್ಷಕರು ಕ್ರೀಯಾಶೀಲರಾದಾಗ ಮಾತ್ರ ಮಕ್ಕಳಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ನಗರದ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವತಿಯಿಂದ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ 2026-27 ನೇ ಸಾಲಿನ ವಿದ್ಯಾರ್ಥಿನಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಎಸ್.ಎಸ್.ಎಲ್‌.ಸಿ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ಸಾಧಿಸಿದ ಅಧ್ಯಾಪಕ ವರ್ಗಕ್ಕೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುಸ್ತಕ ಅಭ್ಯಾಸದ ಜೊತೆಗೆ ಮಕ್ಕಳಲ್ಲಿರುವ ಅಂತಃಶಕ್ತಿಯನ್ನು ಗುರುತಿಸಿ ಸಾಧಕರಾಗಿ ಹೊರಹೊಮ್ಮುವಂತೆ ತಯಾರು ಮಾಡುವತ್ತ ಶಿಕ್ಷಕರು ಹೆಚ್ಚು ಕೇಂದ್ರಿಕರಿಸಲಿ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎನ್‌ಇಎಸ್ ವಿದ್ಯಾರ್ಥಿಗಳು ಅದ್ಭುತ ಸಾಧನೆಗಳನ್ನು ಮಾಡಿ ಜನಮಾನಸದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸುತ್ತಿದ್ದಾರೆ.

ಶಿಕ್ಷಣವೆಂದರೆ ಕೇವಲ ಪಾಠಪುಸ್ತಕಕ್ಕೆ ಸೀಮಿತವಾಗಿರದೆ, ಮಕ್ಕಳಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಅರಿವು ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವ ಪ್ರಕ್ರಿಯೆಯೂ ಆಗಿದೆ. ಹೃದಯಕ್ಕೆ ನೀಡುವ ಶಿಕ್ಷಣವೇ ನೈಜ ಶಿಕ್ಷಣ. ಆದ್ದರಿಂದ ನೈತಿಕತೆ, ಮಾನವೀಯತೆ ಮತ್ತು ಮೌಲ್ಯಗಳನ್ನು ಒಳಗೊಂಡ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜೀವನದಲ್ಲಿ ಎತ್ತರಕ್ಕೆ ಏರುವುದು ಮುಖ್ಯವಾದರೂ, ತಲುಪಿದ ಎತ್ತರವನ್ನು ಕಾಯ್ದುಕೊಳ್ಳುವ ಜಾಗೃತಿ ಇನ್ನಷ್ಟು ಮುಖ್ಯ.

ಮಕ್ಕಳು ಕುಟುಂಬ ವ್ಯವಸ್ಥೆಗೆ ಹೆಚ್ಚಿನ ಮೌಲ್ಯ ನೀಡಬೇಕು. ಪೋಷಕರ ಆಸೆ ಆಕಾಂಕ್ಷೆಗಳಿಗೆ ಗೌರವ ನೀಡಿ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ವ್ಯಕ್ತಿಯ ಉನ್ನತಿಯನ್ನು ಅಳೆಯುವುದು ಅವನು ನಡೆದ ದಾರಿಯಿಂದಲ್ಲ, ಅವನ ನಡತೆಯಿಂದ ಎಂಬುದನ್ನು ಅರಿತುಕೊಳ್ಳಬೇಕು.

ಹಿಯಾಳಿಸುವ ಜನರಿಗೆ ಬೆರಳು ತೋರಿಸುವುದಕ್ಕಿಂತ, ನಿಮ್ಮ ಬೆಳವಣಿಗೆಯ ಮೂಲಕ ಉತ್ತರ ನೀಡಿ. ಕತ್ತಲು ಮತ್ತು ಅಹಂಕಾರ ಎರಡೂ ಒಂದೇ. ಕತ್ತಲಲ್ಲಿ ಬೆಳಕಿಲ್ಲದಂತೆ, ಅಹಂಕಾರದಲ್ಲಿ ಪ್ರಜ್ಞೆಗೆ ಸ್ಥಾನವಿರುವುದಿಲ್ಲ ಎಂದು ಹೇಳಿದರು.

ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, 72 ವರ್ಷಗಳ ಶೈಕ್ಷಣಿಕ ಶ್ರೇಷ್ಟತೆ ಹೊಂದಿರುವ ಕಸ್ತೂರಬಾ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದಿದೆ. ಇಂತಹ ಸಾಧನೆಗಾಗಿ ತಪಸ್ಸಿನಂತೆ ಶ್ರಮಿಸಿದ ಶಿಕ್ಷಕ ಸಮೂಹವನ್ನು ಸಂಸ್ಥೆಯಿಂದ ವಿಶೇಷವಾಗಿ ಅಭಿನಂದಿಸಲಾಗುತ್ತಿದೆ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಿರ್ದೇಶಕರಾದ ಎಚ್.ಸಿ.ಶಿವಕುಮಾರ್, ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್, ವಿದ್ಯಾರ್ಥಿನಿ ಸಂಘದ ಪ್ರಧಾನಿ ಗಾನವಿ, ವಿರೋಧ ಪಕ್ಷದ ನಾಯಕಿ ಕೃತಿಕ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಾಗೂ ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ, ನೆನಪಿನ ಕಾಣಿಕೆ, ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *