ಮಂಜುನಾಥ ಶೆಟ್ಟಿ…
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ವತಿಯಿಂದ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಆಯೋಜಿಸಲಾದ “ನಮ್ಮಭಿಮಾನದ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ”ವು ಸಾವಿರಾರು ಸರ್ಕಾರಿ ನೌಕರರು, ಅವರ ಕುಟುಂಬ ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಸಮಾರಂಭವನ್ನು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ರಾಜ್ಯ ಸರ್ಕಾರಿ ನೌಕರರ ಹಿತಾಸಕ್ತಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಾಮಾಜಿಕ ಬದ್ಧತೆ, ನೌಕರರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮಹತ್ವದ ಕಾರ್ಯಗಳನ್ನು ಸ್ಮರಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಹಾಗೂ ಡಾ ಜಿ ಪರಮೇಶ್ವರ್ ಉಪಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರು, ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಗಳಾದ NPS ರದ್ದುಪಡಿಸಿ OPS ಜಾರಿಗೆ ತರುವ ಬಗ್ಗೆ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ ಯಾವುದೇ ಆತಂಕ ಬೇಡವೆಂದು ಸ್ಪಷ್ಟ ಭರವಸೆಯನ್ನು ನೀಡಿದರು.
ಮಾನ್ಯ ಉಪಮುಖ್ಯಮಂತ್ರಿಗಳು ಸಹ ನಿಮ್ಮ ಜೊತೆ ನಾವಿದ್ದೇವೆ ನಮ್ಮ ಪ್ರಣಾಳಿಕೆಯಲ್ಲಿ ಓಪಿಎಸ್ ಜಾರಿ ಮಾಡುತ್ತೇವೆ ಎಂದು ಹೇಳಿದ್ದೇವೆ ಆ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ.ಎಸ್. ಷಡಾಕ್ಷರಿ ಅವರು ವಹಿಸಿ, ಸಂಘವು ರಾಜ್ಯದಾದ್ಯಂತ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳು, ಆರೋಗ್ಯ ಯೋಜನೆಗಳು, ಪ್ರತಿಭಾ ಪುರಸ್ಕಾರ ಯೋಜನೆಗಳು ಹಾಗೂ ನೌಕರರ ಹಿತಾಸಕ್ತಿಗಾಗಿ ನಡೆಸುತ್ತಿರುವ ಹೋರಾಟಗಳ ಕುರಿತು ನಮ್ಮ ಹಕ್ಕುಗಳು ಈಡೇರಬೇಕೆಂಬ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಲ್. ಭೈರಪ್ಪ, ಶ್ರೀ ರಮೇಶ್ ಸಂಗಾ, ಶ್ರೀ ಅಮೃತ್ ರಾಜ್, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಾವಿರಾರು ಸರ್ಕಾರಿ ನೌಕರರು ಹಾಗೂ ಉಪಸ್ಥಿತರಿದ್ದರು.