ಮಂಜುನಾಥ ಶೆಟ್ಟಿ…

ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಮೇವಿನ ಕೊರತೆ ಇಲ್ಲ. ಜಿಲ್ಲೆಯಲ್ಲಿ 12.76 ಲಕ್ಷ ಟನ್ ಮೇವು ಲಭ್ಯವಿದ್ದು, ಇದು ಮುಂದಿನ 61 ವಾರಗಳವರೆಗೆ ಜಿಲ್ಲೆಯ ಜಾನುವಾರುಗಳ ಅಗತ್ಯವನ್ನು ಪೂರೈಸಲಿದೆ ಎಂದು ಜಿಲ್ಲಾಧಿಕಾರಿ ಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.


ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮೇವು ಅಭಿವೃದ್ದಿ ಕಾರ್ಯಪಡೆ ಸಮಿತಿ ಸಭೆ ಹಾಗೂ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 4.84 ಲಕ್ಷ ದೊಡ್ಡ ಜಾನುವಾರುಗಳು (ದನ ಹಾಗೂ ಎಮ್ಮೆ) ಮತ್ತು 86 ಸಾವಿರ ಸಣ್ಣ ಜಾನುವಾರುಗಳು (ಕುರಿ ಹಾಗೂ ಮೇಕೆ) ಇವೆ.


ತಾಲೂಕುವಾರು ಮೇವಿನ ಲಭ್ಯತೆ…


ಸಾಗರ 75 ವಾರಗಳು, ಭದ್ರಾವತಿ 65 ವಾರಗಳು, ಹೊಸನಗರ 61 ವಾರಗಳು, ತೀರ್ಥಹಳ್ಳಿ 60 ವಾರಗಳು, ಸೊರಬ 59 ವಾರಗಳು, ಶಿವಮೊಗ್ಗ 56 ವಾರಗಳು, ಶಿಕಾರಿಪುರ 48 ವಾರಗಳಿಗೆ ಸಾಕಾಗುವಷ್ಟಿದೆ. ಆದರೂ ಸಹ ಪರ್ಯಾಯ ಮೇವಿನ ಕುರಿತು ರೈತರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.


ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ನಾಗರಾಜ್ ಮಾತನಾಡಿ, ಮೇವು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲು 50 ಸಾವಿರ ಮೇವಿನ ಮಿನಿಕಿಟ್‌ಗಳನ್ನು (ಸುಮಾರು 250 ಟನ್) ಸರಬರಾಜು ಮಾಡಲು ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
‘ವಿಬಿಜಿ – ಜಿ ರಾಮ್ ಜಿ’ ಯೋಜನೆಯಡಿ ಸಮುದಾಯ ಮೇವು ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ್‌ಗಳ ಮೂಲಕ ಕನಿಷ್ಠ 5 ಎಕರೆ ಸರ್ಕಾರಿ ಭೂಮಿಯಲ್ಲಿ ಸಮುದಾಯ ಮೇವು ಬೆಳೆಯಲು ಅವಕಾಶವಿದೆ.


ಬಾಳೆಎಲೆ, ಬಾಳೆದಿಂಡು, ಹೊಂಬಾಳೆ, ಅಡಿಕೆ ಹಾಳೆ, ಕಬ್ಬಿನ ಸಿಪ್ಪೆ ಹಾಗೂ ಮೆಕ್ಕೆಜೋಳದ ರವದಿ/ಸಿಪ್ಪೆಗಳನ್ನು ಪರ್ಯಾಯ ಮೇವಾಗಿ ಬಳಸುವಂತೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ.
ರಸಮೇವು, ಒಣ-ಹಸಿರು ಮೇವು, ಜಲ ಮೇವು ತಯಾರಿಕೆ ಹಾಗೂ ಮೇವಿನ ಮರಗಳಾದ ಸುಬಾಬುಲ್, ಗೊಬ್ಬರ ಗಿಡ, ಹಾಲಿವಾಣ, ನುಗ್ಗೆ ಮತ್ತು ಅಗಸೆ ಎಲೆಗಳನ್ನು ಬಳಸಲು ಸಲಹೆ ನೀಡಲಾಗಿದೆ. ಮೇವಿನ ಮರಗಳ ಬೆಳೆಸುವಿಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.


ಸಂಚಾರಿ ಪಶುಚಿಕಿತ್ಸಾ ಘಟಕ: ಗುರಿ ಮೀರಿದ ಸಾಧನೆ…


ಜೂನ್ ಮಾಹೆಯಲ್ಲಿ ಸಂಚಾರಿ ಪಶುಚಿಕಿತ್ಸಾ ಘಟಕಗಳ ಮೂಲಕ ಉಚಿತ ತುರ್ತು ಸೇವೆ ನೀಡುವಲ್ಲಿ ಶಿವಮೊಗ್ಗ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದ್ದು ನಿಗದಿತ ಗುರಿ 630 ಪ್ರಕರಣಗಳಿದ್ದು 966 ಪ್ರಕರಣಗಳಿಗೆ ಯಶಸ್ವಿ ಚಿಕಿತ್ಸೆ ಮಾಡುವ ಮೂಲಕ ಉತ್ತಮ ಸಾಧನೆ ಮಾಡಲಾಗಿದೆ.
ಈ ಸಂಚಾರಿ ಘಟಕಗಳ ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಿರುವ ಔಷಧಿ ಹಾಗೂ ರಾಸಾಯನಿಕಗಳನ್ನು ತಕ್ಷಣವೇ ಪೂರೈಸುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದರು.


ಜಿಲ್ಲಾಧಿಕಾರಿಗಳು ಮಾತನಾಡಿ, ‘ಪೆಟ್ ಶಾಪ್ ನಿಯಮಗಳು 2018’ ಮತ್ತು ‘ಶ್ವಾನಗಳ ತಳಿ ಸಂವರ್ಧನೆ ನಿಯಮಗಳು 2017’ರ ಅಡಿಯಲ್ಲಿ ಜಿಲ್ಲೆಯಲ್ಲಿ ತಲಾ 12 ಪೆಟ್ ಶಾಪ್ ಹಾಗೂ ಶ್ವಾನ ತಳಿ ಸಂವರ್ಧನಾ ಕೇಂದ್ರಗಳು ನೋಂದಣಿಯಾಗಿವೆ. ಇನ್ನೂ ನೋಂದಣಿ ಮಾಡಿಸದ ಮಾಲೀಕರಿಗೆ ಸ್ಥಳೀಯ ಪಶುವೈದ್ಯ ಸಂಸ್ಥೆಗಳ ಮೂಲಕ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.


ಸಂತಾನ ಹರಣ ಶಸ್ತ್ರಚಿಕಿತ್ಸೆ…

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ನಿಯಮಿತವಾಗಿ ನೆರವೇರಿಸಬೇಕು.
ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಶಾಲೆಗಳು, ಕಾಲೇಜು, ಕಚೇರಿಗಳು, ಬಸ್ ಸ್ಟ್ಯಾಂಡ್ ಮುಂತಾದ ಸಂಸ್ಥೆಗಳ ಆವರಣದಲ್ಲಿರುವ ನಾಯಿಗಳನ್ನು ಮಾತ್ರ ರಿ-ಲೊಕೇಟ್ (ಸ್ಥಳಾಂತರ) ಮಾಡಲು ಅವಕಾಶವಿದ್ದು, ಇಂತಹ ನಾಯಿಗಳಿಗೆ ಶೆಲ್ಟರ್, ಊಟ ಮತ್ತು ಕಾಳಜಿ ವಹಿಸಲು ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಹಾಗೂ ಬೀದಿನಾಯಿಗಳಿಗೆ ಸಂತಾನಹರಣ ಶಸ್ತçಚಿಕಿತ್ಸೆ ಮಾಡಲು ನಾಯಿಗಳನ್ನು ಹಿಡಿಯುವವರು ಬಂದಾಗ ಸಾರ್ವಜನಿಕರು ಸಹಕರಿಸಬೇಕೆಂದರು.
ಪಶುಪಾಲನಾ ಇಲಾಖೆಯು ಖಾಸಗಿ ಗೋಶಾಲೆಗಳ ನಿರ್ವಹಣೆಗೆ ಬೆಂಬಲ ನೀಡುತ್ತಿದ್ದು, ಸಹಾಯಾನುದಾನ ಕೋರಿ 5 ಪ್ರಸ್ತಾವನೆಗಳು ಬಂದಿದ್ದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ., ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ರೇಖಾ, ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ. ಸುದರ್ಶನ್ ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *