ಮಂಜುನಾಥ ಶೆಟ್ಟಿ…

ಸಂಚಾರಿ ಸಿಪಿಐ ದೇವರಾಜ್ ನೇತೃತ್ವದಲ್ಲಿ ನಗರದ ಕುವೆಂಪು ರಸ್ತೆಯ ಪುಟ್ಪಾತ್‌ನ ಹಣ್ಣು ಮತ್ತಿತರ ವ್ಯಾಪಾರಸ್ತರನ್ನು ತೆರವು ಗೊಳಿಸಿದ ಪಾದಚಾರಿಗಳು ಸುಗಮವಾಗಿ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.

ಹಣ್ಣು ಮತ್ತಿತರ ವ್ಯಾಪಾರಸ್ತರು ಈ ಭಾಗದಲ್ಲಿ ದಿನೇ ದಿನೇ ಹೆಚ್ಚಾಗ ತೊಡಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು, ದಿನಾಲು ಓಡಾಡುವ ಪಾದಚಾರಿಗಳು ಹಾಗೂ ಹೋರಾಟ ಗಾರರು ಹಲವು ತಿಂಗಳಿನಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುತ್ತಲೇ ಇದ್ದರು.

ಈ ಬಗ್ಗೆ ಪಾಲಿಕೆ ಕ್ರಮ ಕೂಡ ತೆಗೆದುಕೊಂಡಿತ್ತು, ಹಲವು ಭಾರಿ ನೋಟಿಸ್ ನೀಡಿ ತೆರವಿಗೆ ಸೂಚಿಸಿತ್ತು, ಆದರೂ ಯಾವುದೇ ಪ್ರಯೋಜನ ವಾಗಲಿಲ್ಲ, ವ್ಯಾಪಾರದ ಗಾಡಿಗಳು ಹೆಚ್ಚಾಗಿದ್ದು, ಕೆಲ ಹೋರಾಟಗಾರರು ಮತ್ತು ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ಹಾಗೂ ಮುಖ್ಯವಾಗಿ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕುವೆಂಪು ರಸ್ತೆಯ ಹಣ್ಣು ಮತ್ತಿತರ ವ್ಯಾಪಾರಿಗಳ ಗಾಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

ಪುಟ್ಪಾತ್ ಇಲ್ಲದೆ ಇಕ್ಕಟ್ಟಿನಿಂದಿದ್ದ ಕುವೆಂಪು ರಸ್ತೆಯು ಈಗ ಫುಲ್ ಕ್ಲೀನ್ ಆಗಿ ಸ್ವಾಲ್ಪ ವಿಶಾಲವಾಗಿ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯ ಪುಟ್ಪಾತ್ ನಲ್ಲಿ ಯಾವುದೇ ವ್ಯಾಪಾರಕ್ಕೆ ಅನುವು ಮಾಡಿಕೊಡದಂತೆ ನೋಡಿಕೊಳ್ಳಬೇಕಷ್ಟೆ.

ರಸ್ತೆ ಅಗಲೀಕರಣದ ಸಮಸ್ಯೆ ಬಗೆಯರಿಯಲೇ ಇಲ್ಲ…

ಶಿವಮೊಗ್ಗ ನಗರದ ಕುವೆಂಪು ರಸ್ತೆ ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ರಸ್ತೆಗಳನ್ನು ಅಗಲೀಕರಣ ಮಾಡಲು ತೀರ್ಮಾನಿಸಲಾಗಿತ್ತು. ಕಟ್ಟಡಗಳ ಮಾಲೀಕರು ಸಹ ಇದಕ್ಕೆ ಸಮ್ಮತಿಸಿದ್ದರು. ಈ ಭಾಗಗಳಲ್ಲಿ ರಸ್ತೆ ಅಗಲೀಕರಣಕ್ಕೆ ಮಾರ್ಕ್‌ಗಳನ್ನೂ ಸಹ ಹಾಕಲಾಗಿತ್ತು. ಆದರೆ ಕುವೆಂಪು ರಸ್ತೆಗೆ ಹೊಸದಾಗಿ ಟಾರ್ ಹಾಕುವ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಆಗುವ ವಿಶ್ವಾಸ ಎಲ್ಲರಲ್ಲೂ ಇತ್ತು.

ಇಲ್ಲಿನ ಅಂಗಡಿ ಮತ್ತು ಮನೆಗಳ ಮಾಲೀಕರು ಗುರುತು ಮಾಡಿದ್ದ ಜಾಗವನ್ನು ಬಿಟ್ಟುಕೊಡಲು ಸಿದ್ದರಾಗಿದ್ದರು. ಆದರೆ ನಮ್ಮ ಜನಪ್ರತಿನಿಧಿಗಳು, ರಸ್ತೆ ಅಗಲೀಕರಣ ಮಾಡದೆ ಯಾವುದೋ ಒಪ್ಪಂದಕ್ಕೆ ತಲೆ ಭಾಗಿದ್ದ ಹಿನ್ನಲೆಯಲ್ಲಿ ಈ ರಸ್ತೆ ಅಗಲೀಕರಣ ಆಗಲೇ ಇಲ್ಲ. ಹೀಗಾಗಿ ಈ ರಸ್ತೆ ಮತ್ತಷ್ಟು ಕಿಷ್ಕಿಂದವಾಗಿ ಜನ ಸಂಚಾರಕ್ಕೆ ಮತ್ತಷ್ಟು ತೊಂದರೆ ತಂದಿದ್ದಂತು ಸತ್ಯವೇ ಆಗಿತ್ತು. ಕುವೆಂಪು ರಸ್ತೆ ಪುಟ್ಫಾತ್‌ಗಳು ಹಣ್ಣು ಹಂಪಲುಗಳ ಆಗರವಾಗಿತ್ತು. ಅದೇ ರೀತಿ ಪುಟ್ಪಾತ್‌ಗಳಲ್ಲಿ ವಾಹನಗಳು ನಿಲ್ಲುವ ಮೂಲಕ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು.

ದುರ್ಗಿಗುಡಿ ಮುಖ್ಯ ರಸ್ತೆ ಹಾಗೂ ಜೈಲ್ ರಸ್ತೆಗಳ ಅಗಲೀಕರಣ ವಿಚಾರದಲ್ಲಿ ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ಹೊಂದಿದ ಹಿನ್ನಲೆಯಲ್ಲಿ ಈ ರಸ್ತೆಗಳು ಅಗಲೀಕರಣ ಕಾಣದೇ ಈಗಲೂ ಸಹ ಇಲ್ಲಿ ಸಂಚರಿಸುವುದೇ ಸರ್ಕಸ್ ಮೇಲಿನ ತಂತಿ ನಡಿಗೆಯಾಗಿ ಪರಿಣಮಿಸಿದೆ. ಒಟ್ಟಾರೆ ನಮ್ಮ ಜನಪ್ರತಿನಿಧಿಗಳಿಗೆ ಊರಿನ ಹಿತಕ್ಕಿಂತ ಕೆಲವೇ ಪಟಭದ್ರರ ಹಿತಾಸಕ್ತಿ ಮುಖ್ಯ ಎಂಬುದು ಸಾಬೀತಾಗಿದೆ.

ಈಗಲೂ ಕಾಲ ಮಿಂಚಿಲ್ಲ ನಮ್ಮ ಜನಪ್ರತಿನಿಧಿಗಳು ಈ ರಸ್ತೆಗಳನ್ನು ಅಗಲೀಕರಣ ಮಾಡುವತ್ತ ದಿಟ ಹೆಜ್ಜೆ ಇಟ್ಟಲ್ಲಿ ಸುಗಮ ಸಂಚಾರಕ್ಕೆ ಅನುವಾಗುತ್ತದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂಬ ಸಮಸ್ಯೆ ಉದ್ಭವವಾಗಿದೆ. ಜನಪ್ರತಿನಿಧಿಗಳ ನಿಲುವಿನ ವಿರುದ್ಧ ಜನತೆ ಸಿಡಿದೆದ್ದಲ್ಲಿ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ.

Leave a Reply

Your email address will not be published. Required fields are marked *