ಮಂಜುನಾಥ ಶೆಟ್ಟಿ…

22.42 ಕೋಟಿ ರೂ. ವೆಚ್ಚದ ಯೋಜನೆಗಳಿಂದ ಜಿಲ್ಲೆಯ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು; ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಯ ರೈತರಿಗೆ ನೀರಾವರಿ ಸೌಲಭ್ಯ, ಅಂತರ್ಜಲ ಮರುಪೂರಣಕ್ಕೂ ಅನುಕೂಲ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರನ್ನು ನಿನ್ನೆ ಭೇಟಿ ಮಾಡಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಕೊಳವೆ ಮಾರ್ಗದ ಮೂಲಕ ನೀರು ತುಂಬಿಸುವ ಒಟ್ಟು 22.42 ಕೋಟಿ ರೂ. ಅಂದಾಜು ವೆಚ್ಚದ ಮಹತ್ವದ ಯೋಜನೆಗೆ ತುರ್ತಾಗಿ ಅನುಮೋದನೆ ನೀಡಿ, ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿತು. ರೈತರ ಬಹುಕಾಲದ ನೀರಿನ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದ ರಾಘವೇಂದ್ರ ರಾಜ್ಯ ಸರ್ಕಾರದ ಗಮನ ಸೆಳೆದು, ಯೋಜನೆಯ ತುರ್ತು ಅಗತ್ಯವನ್ನು ಸಚಿವರ ಗಮನಕ್ಕೆ ತಂದಿತು.

ನಿಯೋಗದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ್ ಸರ್ಜಿ, ಮಾಜಿ ಶಾಸಕ ಶ್ರೀ ಕೆ.ಬಿ.ಅಶೋಕ್ ನಾಯಕ್, ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಸಿಂಗನಹಳ್ಳಿ ಸುರೇಶ್ ಸೇರಿದಂತೆ ಪ್ರಮುಖ ರೈತ ಮುಖಂಡರು ಉಪಸ್ಥಿತರಿದ್ದರು.

ಯೋಜನೆಗಳ ವಿವರ ಹಾಗೂ ಪ್ರಯೋಜನಗಳು

ತುಂಗಾ ನದಿಯಿಂದ ಎತ್ತಲಾಗುವ 1.347 ಟಿ.ಎಂ.ಸಿ ನೀರಿನ ಮೂಲಕ ಶಿವಮೊಗ್ಗ ತಾಲೂಕಿನ ಹಾಯ್‌ಹೊಳೆ, ಬಾರೇಹಳ್ಳ ಮತ್ತು ಗೌಡನಕೆರೆ ಅಡಿ ಬರುವ 7,310 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸುವ ಯೋಜನೆ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಪ್ರಸ್ತಾವನೆಗೆ ತುರ್ತು ಅನುಮೋದನೆ ಹಾಗೂ ಅನುದಾನ ಕೋರಿ ಮನವಿ ಸಲ್ಲಿಸಲಾಯಿತು. ಹೊಸಹಳ್ಳಿ ಹಾಗೂ ತುಂಗಾ ಏತ ನೀರಾವರಿ ಯೋಜನೆಗಳಡಿ ಗುರುತ್ವಾಕರ್ಷಣೆಯ (ಗ್ರ್ಯಾವಿಟಿ) ಮೂಲಕ ನೀರು ಹರಿಸುವ ಮಾರ್ಗಗಳಿಗೆ ಹಾನಿ ಹಾಗೂ ಹರಿವಿನ ಮೇಲ್ಭಾಗದಲ್ಲಿ ನೀರಿನ ಬಳಕೆ ಹೆಚ್ಚಿರುವುದರಿಂದ, ಅಂತಿಮ ಪ್ರದೇಶದ ಕೆರೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ.

ಇದರಿಂದ ಈ ಭಾಗದ ರೈತರು ನೀರಾವರಿಗಾಗಿ ಸಂಕಷ್ಟ ಎದುರಿಸುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುವ ಜೊತೆಗೆ ಜಾನುವಾರು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ಹಂತಗಳಲ್ಲಿ ಕೊಳವೆ ಮಾರ್ಗದ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಒಟ್ಟು 22.42 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮೊದಲ ಹಂತಕ್ಕೆ 9.76 ಕೋಟಿ ರೂ., ಎರಡನೇ ಹಂತಕ್ಕೆ 9.96 ಕೋಟಿ ರೂ. ಹಾಗೂ 2.70 ಕೋಟಿ ರೂ. ಸೇರಿದಂತೆ ಒಟ್ಟು 22.42 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ಯೋಜನೆ ಜಾರಿಯಾದಲ್ಲಿ ಕೊನೆ ಭಾಗದ ರೈತರಿಗೂ ನೀರಾವರಿ ಸೌಲಭ್ಯ ಬಲಗೊಳ್ಳುವುದರೊಂದಿಗೆ ಅಂತರ್ಜಲ ಮರುಪೂರಣಕ್ಕೂ ಸಹಕಾರಿಯಾಗಲಿದೆ.

ಸಂಸದರ ನೇತೃತ್ವದ ನಿಯೋಗದ ಮನವಿಯನ್ನು ಆಲಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಭಾಗದ ರೈತರ ನೀರಿನ ತುರ್ತು ಅಗತ್ಯವನ್ನು ಮನಗಂಡ ಸಚಿವರು, ಪ್ರಸ್ತಾವನೆಯ ಕಡತವನ್ನು ಪರಿಶೀಲಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲೆಯ ರೈತರ ನೀರಿನ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರಿನ ಲಭ್ಯತೆ ಉದ್ದೇಶದಿಂದ ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪ್ರಯತ್ನಗಳನ್ನು ರೈತ ಮುಖಂಡರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *