ಮಂಜುನಾಥ್ ಶೆಟ್ಟಿ…
ರಾಜ್ಯ ಸರ್ಕಾರ ಮತ್ತು ಪಕ್ಷದ ವರಿಷ್ಟರು ನನ್ನ ಮೇಲೆ ವಿಶ್ವಾಸವಿಟ್ಟು, ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಗೆ ಧಕ್ಕೆಯಾಗದಂತೆ ಶಿವಮೊಗ್ಗ- ಭದ್ರಾವತಿ ಅವಳಿನಗರಗಳ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ( ಸೂಡಾ) ದ ನೂತನ ಅಧ್ಯಕ್ಷ ಸಿ.ಜಿ. ಮಧುಸೂದನ್ ಹೇಳಿದರು.
ನಗರದ ಸೂಡಾ ಕಚೇರಿಯಲ್ಲಿ ಪಕ್ಷದ ಹಿರಿಯರು, ಕಾರ್ಯಕರ್ತರು ಹಾಗೂ ನೂರಾರು ಮಂದಿ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಸೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿ, ಚಿಕ್ಕ ವಯಸ್ಸಿಗೆ ನಾನು ಎನ್ ಎಸ್ ಯು ಐ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಂದವನು. ಅಪ್ಪ- ಅಮ್ಮ ನಿಗೆ ನಾನು ಸರ್ಕಾರಿ ಹುದ್ದೆಗೆ ಹೋಗಬೇಕೆನ್ನುವ ಆಸೆ. ಹಾಗಾಗಿ ನಾನು ಎನ್‌ಎಸ್‌ಯು ಐ ಮೂಲಕ ವಿದ್ಯಾರ್ಥಿ ಸಂಘಟನೆ ಯಲ್ಲಿ ತೊಡಗಿಸಿಕೊಂಡು ಕೇಸು, ವಗೈರೆ ಅಂತ ಓಡಾಡುವಾಗ ತುಂಬಾ ಬೇಸರಪಟ್ಟುಕೊಳ್ಳುತ್ತಿದ್ದರು. ಆದರೆ ಇವತ್ತು ಅವರಲ್ಲಿ ಕಂಡ ಖುಷಿ ನನ್ನ ಬದುಕಿನಲ್ಲೊಂದು ಸಮಾಧಾನ ತಂದಿದೆ ಎಂದರು.
ಸೂಡಾ ಅಧ್ಯಕ್ಷ ಹುದ್ದೆ ನನಗೆ ಸುಲಭವಾಗಿ ಸಿಕ್ಕಿರಬಹುದು, ಆದರೆ ಇದರ ಹಿಂದೆ ದೊಡ್ಡ ಪರಿಶ್ರಮವಿದೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಿಗೆ, ಕಷ್ಟಪಟ್ಟವರಿಗೆ, ಪಕ್ಷ ಸಂಘಟನೆಗೆ ದುಡಿದವರಿಗೆ ಯಾವತ್ತಿದ್ದರೂ ಪ್ರತಿಫಲ ಇದ್ದೇ ಎನ್ನುವುದಕ್ಕೆ ನಾನೇ ಸಾಕ್ಷಿ. ಹಾಗಾಗಿ ವರಿಷ್ಟರು ನನ್ನ ಮೇಲೆ ವಿಶ್ವಾಸವಿಟ್ಟು ನೀಡಿದ ಈ ಹುದ್ದೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಜನಮುಖಿಯಾಗಿ ಹಾಗೂ ಪಕ್ಷದ ಯುವಕರಿಗೆ ಸ್ಪೂರ್ತಿಯಾಗುವ ಹಾಗೆ ಬಳಸಿಕೊಳ್ಳುವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ,ವಿಧಾನ ಪರಿಷತ್ ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಪಕ್ಷದ ಮುಖಂಡರಾದ ಎಸ್. ರವಿಕುಮಾರ್, ಬಿ. ಎಸ್. ಬಸವೇಶ್, ಧೀರರಾಜ್ ಹೊನ್ನವಿಲೆ, ಎಸ್.ಪಿ. ಶೇಷಾದ್ರಿ, ಎಂ.ಎಸ್. ಸಿದ್ದಪ್ಪ, ನೇತ್ರಾವತಿ ಗೌಡ, ತಂಗರಾಜ್, ಗಿರೀಶ್ ಬುಕ್ಲಾಪುರ, ವೈ. ತಿಮ್ಮರಾಜು, ವೀರೇಶ್, ಹಾಲೇಶ್, ಚರಣ್, ರವಿ ಇನ್ನಿತರರಿದ್ದರು.