ಮಂಜುನಾಥ್ ಶೆಟ್ಟಿ…
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆ.ಯು.ಡಬ್ಲ್ಯೂ.ಜೆ) ಶಿವಮೊಗ್ಗ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿದ ಕೆ.ಯು.ಡಬ್ಲ್ಯೂ.ಜೆಯ ರಾಜ್ಯ ಸಮಿತಿಯ ಎನ್ ರವಿಕುಮಾರ್ (ಟೆಲೆಕ್ಸ್ ರವಿ), ದೇಶದ ವಿವಿಧೆಡೆ ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಪ್ರತಿಭಟನೆಗಳನ್ನು ವರದಿ ಮಾಡಲು ತೆರಳುವ ಪತ್ರಕರ್ತರ ಮೇಲೆಯೇ ಪೊಲೀಸ್ ದೌರ್ಜನ್ಯ ನಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಹೇಳಿದರು.
ವಿಶೇಷವಾಗಿ ಜಂತರ್ ಮಂತರ್‌ನಲ್ಲಿ ಮಹಿಳಾ ಪತ್ರಕರ್ತರ ಮೇಲೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ, ಹಲ್ಲೆ ನಡೆಸಿದ್ದಾರೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ಗಂಭೀರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಂತರ್ ಮಂತರ್ ಘಟನೆಯಲ್ಲಿ ಮಹಿಳಾ ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ಅಥವಾ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ‘ನ್ಯಾಯ ಬೇಕು’, ‘ವೀ ವಾಂಟ್ ಜಸ್ಟಿಸ್’ ಎಂಬ ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ಕೆಯುಡಬ್ಲೂಜೆಯ ಹಾಲಸ್ವಾಮಿ, ದೇಶಾದ್ರಿ ಸತ್ಯನಾರಾಯಣ್, ಸತೀಶ್, ರಘುಶೆಟ್ಟಿ, ಗಾರಾ ಶ್ರೀನಿವಾಸ್, ಸೋಮನಾಥ್ ಮೊದಲಾದವರು ಉಪಸ್ಥಿತರಿದ್ದರು.