ಮಂಜುನಾಥ್ ಶೆಟ್ಟಿ…

ಕನ್ನಡವೆಂದರೆ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಭಾವನೆ, ಬದುಕಿನ ಕ್ರಮ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತಿಬಿಂಬವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಕನ್ನಡ ಭಾಷೆ ಬಳಕೆ ವ್ಯಾಪಕವಾಗಬೇಕು ಎಂದು ಜಿಲ್ಲಾಧಿಕಾರಿ ಪ್ತಭುಲಿಂಗ ಕವಳಿಕಟ್ಟಿ ಆಶಿಸಿದರು.


ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ, ರಾಜ್ಯೋತ್ಸವ ಸಂದೇಶ ನೀಡಿದರು.
ನವೆಂಬರ್ 1 ಕನ್ನಡಿಗರ ಪಾಲಿಗೆ ಕೇವಲ ಒಂದು ದಿನಾಂಕವಲ್ಲ, ಬದಲಿಗೆ ನೂರಾರು ವರ್ಷಗಳ ಹೋರಾಟ, ತ್ಯಾಗ, ಕನಸು ಮತ್ತು ಕನ್ನಡಿಗರ ಒಗ್ಗಟ್ಟಿನ ಸಂಕೇತವಾಗಿದೆ. ಭಾಷಾವಾರು ಪ್ರಾಂತ್ಯಗಳು ಒಗ್ಗೂಡಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು ಮತ್ತು ನಂತರ 1973ರ ನವೆಂಬರ್ 1ರಂದು ‘ಕರ್ನಾಟಕ’ ಎಂದು ಮರುನಾಮಕರಣಗೊಂಡಿತು. ಈ ಐತಿಹಾಸಿಕ ದಿನವು ನಮ್ಮ ಭಾಷಾ ಏಕತೆ, ನಾಡಿನ ಅಸ್ಮಿತೆ ಹಾಗೂ ಸಾಂಸ್ಕೃತಿಕ ಸ್ವಾಭಿಮಾನದ ಪ್ರತೀಕವಾಗಿದೆ.


ಶಿವಮೊಗ್ಗ ಜಿಲ್ಲೆಯು ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಪರಂಪರೆಯ ಶ್ರೀಮಂತ ನೆಲವಾಗಿದೆ.
ರಾಷ್ಟ್ರಕವಿ ಕುವೆಂಪು: ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದ ರಾಷ್ಟ್ರಕವಿ ಕುವೆಂಪು ಅವರು ಸಾರಿದ ವಿಶ್ವಮಾನವ ಸಂದೇಶವು ಇಡೀ ಮಾನವಕುಲಕ್ಕೆ ದಾರಿ ದೀಪವಾಗಿದೆ. ಜಾತಿ, ಧರ್ಮ, ಭಾಷೆಗಳನ್ನು ಮೀರಿ ಮನುಷ್ಯತ್ವವೇ ಶ್ರೇಷ್ಠ ಎಂಬ ಅವರ ಚಿಂತನೆ ಇಂದಿಗೂ ಪ್ರಸ್ತುತ.
ಜ್ಞಾನಪೀಠ ಪ್ರಶಸ್ತಿಗಳು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರ ಸಾಹಿತ್ಯವು ಸಾಮಾಜಿಕ ಹಾಗೂ ವೈಚಾರಿಕ ಚಿಂತನೆಗಳಿಗೆ ಹೊಸ ಆಯಾಮ ನೀಡಿದೆ. ಶಿವಮೊಗ್ಗ ಜಿಲ್ಲೆಯು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪಪ್ಪ ಹಾಗೂ ಯು.ಆರ್. ಅನಂತಮೂರ್ತಿ ಅವರಂತಹ ಇಬ್ಬರು ಜ್ಞಾನಪೀಠ ಪುರಸ್ಕೃತರನ್ನು ನೀಡುವುದರ ಜೊತೆಗೆ, ಮೂರು ಜನ ಮುಖ್ಯಮಂತ್ರಿಗಳನ್ನು ನಾಡಿಗೆ ನೀಡಿದ ಹೆಮ್ಮೆ ಹೊಂದಿದೆ.


ಸಾಹಿತ್ಯ ದಿಗ್ಗಜರು…

ಅಕ್ಕಮಹಾದೇವಿಯವರ ವಚನಗಳು, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ, ಎಂ.ಕೆ. ಇಂದಿರಾ, ನಾ. ಡಿಸೋಜ, ಎಸ್.ವಿ. ಪರಮೇಶ್ವರ ಭಟ್ಟ, ಕೆ.ವಿ. ಸುಬ್ಬಣ್ಣ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ.


ರಂಗಭೂಮಿ ಮತ್ತು ಕಲೆಗಳು…

ಸಾಗರ ತಾಲೂಕಿನ ಹೆಗ್ಗೋಡಿನ ‘ನೀನಾಸಂ’ ಸಂಸ್ಥೆಯು ಕನ್ನಡ ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಕೊಡುಗೆ ನೀಡಿದೆ. ಯಕ್ಷಗಾನ, ಡೊಳ್ಳು ಕುಣಿತ, ಕೋಲಾಟ, ಜಾನಪದ ಹಾಡುಗಳು, ಸುಗ್ಗಿ ಸಂಭ್ರಮ ಹಾಗೂ ಚಿತ್ತಾರ ಕಲೆಯಂತಹ ಸಾಂಪ್ರದಾಯಿಕ ಕಲೆಗಳು ನಮ್ಮ ಜನಜೀವನದ ಸೊಗಡನ್ನು ಬಿಂಬಿಸುತ್ತವೆ.
ಕೆಳದಿ, ಇಕ್ಕೇರಿ, ಬಳ್ಳಿಗಾವಿ ಮತ್ತು ತಾಳಗುಂದದ ಐತಿಹಾಸಿಕ ಪರಂಪರೆ ನಮ್ಮ ಪೂರ್ವಜರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಜೋಗ ಜಲಪಾತ, ಕೋದಚಾದ್ರಿ, ಆಗುಂಬೆಯ ಮಳೆಕಾಡುಗಳು, ತುಂಗಾ ಮತ್ತು ಶರಾವತಿ ನದಿಗಳು ಶಿವಮೊಗ್ಗಕ್ಕೆ ವಿಶೇಷ ಗುರುತು ತಂದುಕೊಟ್ಟಿವೆ.
ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡದ ಬಳಕೆ ಮತ್ತು ಜವಾಬ್ದಾರಿ
ಕನ್ನಡವೆಂದರೆ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಭಾವನೆ, ಬದುಕಿನ ಕ್ರಮ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತಿಬಿಂಬವಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡದ ಬಳಕೆ ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲೂ ವ್ಯಾಪಕವಾಗಬೇಕು. ಇಂಗ್ಲಿಷ್ ಭಾಷೆಯ ಜ್ಞಾನ ಅಗತ್ಯವಿದ್ದರೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವ, ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ಸಂವಿಧಾನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.


ಈ ಸಾಲಿನ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವರು ಹಾಗೂ ಸಮಾಜವಾದಿ ಚಿಂತನೆಯ ನಾಯಕರಾದ ಕಾಗೋಡು ತಿಮ್ಮಪ್ಪ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅತ್ಯಂತ ಸಂತಸದ ವಿಷಯ ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮ ನಾಡು ಎಲ್ಲಾ ಜಾತಿ ಧರ್ಮಗಳ ಜನರು ಸಾಮರಸ್ಯದಿಂದ ಬದುಕುವ ಸುಂದರ ತೋಟವಾಗಿಯೇ ಉಳಿಯಬೇಕು ಎಂದು ಆಶಿಸಿದರು.

ಕನ್ನಡ ರಾಜ್ಯೋತ್ಸವದ ವಿಶೇಷತೆಗಳು…

  • ಕಸ್ತೂರಿ ಬಾ ಪ್ರೌಢಶಾಲೆಯ ಸುಮಾರು 350 ವಿದ್ಯಾರ್ಥಿನಿಯರು ಹಳದಿ, ಕೆಂಪು ಮತ್ತು ನೀಲಿ ಬಣ್ಣದ ಸೀರೆಗಳನ್ನು‌ ಧರಿಸಿ, ತಮ್ಮ ತಲೆಯ ಮೇಲೆ ಕನ್ನಡದ ಕಳಸಗಳನ್ನು ಹೊತ್ತು ಸಾಗಿದ ದೃಶ್ಯ ಅದ್ಭುತ ವಾಗಿತ್ತು.
  • ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…ಸೇರಿದಂತೆ ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುವ ಕನ್ನಡದ ಹಾಡುಗಳಿಗೆ ವಿವಿಧ ಶಾಲೆಯ ಮಕ್ಕಳು ಮನ ಸೆಳೆಯುವಂತೆ ಸಾಮೂಹಿಕ ನೃತ್ಯ ಪ್ರದರ್ಶಿಸಿದರು.
  • ಸೈನ್ಸ್ ಮೈದಾನದಿಂದ ಕಲಾ ತಂಡಗಳೊಂದಿಗೆ
    ನೆಹರು ಕ್ರೀಡಾಂಗಣದವರೆಗೆ ಹೊರಟ ಶ್ರೀಭುವನೇಶ್ವರಿ ದೇವಿಯ ಮೆರವಣಿಗೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು.
    ಆರ್ ಪಿ ಸೋಮಶೇಖರಪ್ಪ ಕವಾಯತು ಅನುಮತಿ ಪಡೆದು ಕನ್ನಡದಲ್ಲಿ ಆಜ್ಞೆ ನೀಡಿ, ಆಕರ್ಷಕ ಪಥಸಂಚನದ ನೇತೃತ್ವ ವಹಿಸಿದರು.

  • ಕೆಎಸ್ ಆರ್ ಪಿ, ಡಿಎಆರ್ ತುಕಡಿ , ಸುಶ್ರಾವ್ಯ ವಾದ್ಯ ತಂಡ, ಡೊಳ್ಳು ಕುಣಿತ, ಕೋಲಾಟ, ವೀರಗಾಸೆ, ಸ್ಯಾಕ್ಸೊಫೋನ್, ಪುರವಂತಿಕೆ, ವಿವಿಧ ಶಾಲೆಗಳ ವಿದ್ಯಾರ್ಥಿಗಳ ವೇಷಭೂಷಣ ಪ್ರದರ್ಶನದೊಂದಿಗೆ ಸಾಗಿದ ತಂಡಗಳು ಆಕರ್ಷಕ ಪಥಸಂಚಲನದೊಂದಿಗೆ
    ಗೌರವ ವಂದನೆ ಸಲ್ಲಿಸಿದರು.

  • ಪ್ರಶಸ್ತಿ…
  • ಶಿಸ್ತು ಮತ್ತು ಆಕರ್ಷಕವಾಗಿ ಪಥ ಸಂಚನದಲ್ಲಿ ಪಾಲ್ಗೊಂಡ. ಮಹಾವೀರ ವಿದ್ಯಾಸಂಸ್ಥೆಗೆ ಪ್ರಥಮ, ಪೋದಾರ್ ಇಂಟರ್ ನ್ಯಾಷನಲ್ ಶಾಲೆಗೆ
    ದ್ವಿತೀಯ, ಡಿವಿಎಸ್ ಪ್ರೌಢಶಾಲೆಗೆ ತೃತೀಯ ಪ್ರಶಸ್ತಿ ನೀಡಲಾಯಿತು .

  • ಸ್ತಬ್ದಚಿತ್ರಗಳಿಗೆ ಪ್ರಶಸ್ತಿ…
  • ಕೆಎಸ್ ಆರ ಟಿ ಸಿ ಯ ಸ್ತಬ್ದಚಿತ್ರಕ್ಕೆ ಪ್ರಥಮ, ಆರೋಗ್ಯ ಇಲಾಖೆ ದ್ವಿತೀಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತೃತೀಯ ಸ್ಥಾನ ನೀಡಲಾಯಿತು.

  • ಕಾರ್ಯಕ್ರಮದಲ್ಲಿ ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಜಿ.ಪಂ. ಸಿಇಓ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಪಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್, ಎಸಿ ಡಾ.ಮೈತ್ರಿ, ಪಾಲಿಕೆ ಆಯುಕ್ತರು, ತಹಶೀಲ್ದಾರರು, ಕನ್ನಡ ಸಂಘಟನೆಗಳು, ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *