ಆಧುನಿಕ ಯುಗದಲ್ಲಿ ವಿಜ್ಞಾನ ಮಹತ್ತರ ಪಾತ್ರ ವಹಿಸುತ್ತಿದ್ದು, ಜೀವನದ ಪ್ರತಿಯೊಂದು ಹಂತದಲ್ಲಿಯೂ ವಿಜ್ಞಾನದ ಅವಶ್ಯಕತೆ ಇದೆ. ವಿಜ್ಞಾನದ ಬಗ್ಗೆ ತಿಳವಳಿಕೆ ಅಗತ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಂ.ರಮೇಶ್ ಹೇಳಿದರು.
ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ “ವಿದ್ಯಾರ್ಥಿ-ವಿಜ್ಞಾನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಹಂತದಲ್ಲಿಯೇ ವಿಜ್ಞಾನ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಂಡು ವಿಜ್ಞಾನದ ಹೊಸ ಹೊಸ ವಿಷಯಗಳನ್ನು ಅರಿತುಕೊಳ್ಳಬೇಕು. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ವಿಜ್ಞಾನ ವಿಷಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ವಿಜ್ಞಾನದಲ್ಲಿ ನಡೆಯುತ್ತಿರುವ ಹೊಸ ಹೊಸ ಆವಿಷ್ಕಾರಗಳಿಂದ ಬದುಕು ಸುಲಭ ಆಗುತ್ತಿದೆ. ವಿಜ್ಞಾನದ ಬಗ್ಗೆ ಅರಿವು ಮೂಡಿಸುವಲ್ಲಿ ರಾಜ್ಯ ವಿಜ್ಞಾನ ಪರಿಷತ್ ಪ್ರಮುಖ ಪಾತ್ರ ವಹಿಸುತ್ತಿದೆ. ಶಿಕ್ಷಣ ಇಲಾಖೆಯು ಪರಿಷತ್ ಜತೆಗೂಡಿ ವಿಜ್ಞಾನದ ಧ್ಯೇಯೋದ್ದೇಶಗಳನ್ನು ಎಲ್ಲ ವಿದ್ಯಾರ್ಥಿಗಳಿಗೂ ತಲುಪಿಸುವ ಕಾರ್ಯ ನಡೆಸುತ್ತಿದೆ. ಶಿಕ್ಷಕರು ಸಹ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಬೆಳೆಸಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಎಂ.ಎಸ್.ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಅಧ್ಯಯನದಲ್ಲಿ ತೊಡಗಿಸಿಕೊಂಡು ಹೊಸ-ಹೊಸ ಆವಿಷ್ಕಾರಗಳ ಕಡೆ ಆಸಕ್ತಿ ವಹಿಸುವುದರ ಜೊತೆಗೆ ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದ ಕರಾವಿಪ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ಮೂಲ ವಿಜ್ಞಾನದ ಕಡೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವೈಜ್ಞಾನಿಕ ಉದಾಹರಣೆಗಳ ಮೂಲಕ ವಿವರಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಎಲ್.ಕೆ.ಶ್ರೀಪತಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಷ್ಟು ಸಂಪನ್ಮೂಲಗಳ ಕೊರತೆಯಾಗುತ್ತಿದೆ. ಕೈಗಾರಿಕಾ ಕ್ರಾಂತಿಯಿAದ ನೀರು, ಗಾಳಿ, ಆಹಾರ ಕಲುಷಿತವಾಗುತ್ತಿದ್ದು, ಆರೋಗ್ಯ ಹದಗೆಡುತ್ತದೆ. ಹಾಗಾಗಿ ಮೂಲ ಅವಶ್ಯಕತೆಗಳು ಹಾಳಾಗದಂತೆ ಆವಿಷ್ಕಾರಗಳಾಗಬೇಕಿದೆ ಎಂದರು.
ಕಾಲೇಜಿನ ಉಪಪ್ರಾಚಾರ್ಯ ಉಮೇಶ್ ಕೆ. ಆರ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಡಾ. ಪರಿಸರ ನಾಗರಾಜ್, ಕರಾವಿಪ ದಾನಿ ಸದಸ್ಯ ವಿಜಯಕುಮಾರ್, ಕರಾವಿಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಫ್ರಾನ್ಸಿಸ್ ಬೆಂಜಮಿನ್, ಜಿಲ್ಲಾ ಸಮಿತಿಯ ಡಾ. ರಶ್ಮಿ ಫ್ರಾನ್ಸಿಸ್, ಕಾರ್ಯದರ್ಶಿ ಲೋಕೇಶ್ವರಪ್ಪ ಎಸ್.ಎಂ, ಗಾಯತ್ರಿ ಉಪಸ್ಥಿತರಿದ್ದರು.
ಕರೋನ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಆನ್ ಲೈನ್ ಮೂಲಕ ವಿಜ್ಞಾನ ಪ್ರಾತ್ಯಕ್ಷಿಕೆ ಮತ್ತು ವಿಜ್ಞಾನ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜ್ಞಾನ ಭಾಷಣ ಸ್ಪರ್ಧೆಯಲ್ಲಿ ಸೊರಬ ತಾಲ್ಲೂಕಿನ ಕೋಟಿಪುರ ಎವೆರಾನ್ ಶಾಲೆಯ ದೀಕ್ಷಿತಾ ಶಾನ್‌ಬಾಗ್ ಪ್ರಥಮ ಬಹುಮಾನ, ಅದೇ ಶಾಲೆಯ ತನುಜಾ ಡಿ.ಎಸ್ ದ್ವಿತೀಯ ಬಹುಮಾನ ಹಾಗೂ ಸಾಗರ ತಾಲ್ಲೂಕಿನ ತಾಳಗುಪ್ಪ ನಲಂದಾ ಪ್ರೌಢಶಾಲೆಯ ಸಂಪತ್ ಎಂ. ತೃತೀಯ ಬಹುಮಾನ ಪಡೆದರು. ವಿಜ್ಞಾನ ಪ್ರಾತ್ಯಕ್ಷಿಕೆ ಸ್ಪರ್ಧೆಯಲ್ಲಿ ಶಿವಮೊಗ್ಗ ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಿಂಚನ ಕೆ. ಎನ್ ಪ್ರಥಮ ಬಹುಮಾನ, ಕಡೇಕಲ್ ಸರ್ಕಾರಿ ಪ್ರೌಢಶಾಲೆಯ ಯಶವಂತ್ ಕೆ. ಎಲ್, ದ್ವಿತೀಯ ಬಹುಮಾನ ಮತ್ತು ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸೃಷ್ಠಿ ತೃತೀಯ ಬಹುಮಾನ ಪಡೆದರು. ಬಹುಮಾನವು ನಗದು, ವಿಜ್ಞಾನ ಪುಸ್ತಕಗಳು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿತ್ತು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153