ಮಕ್ಕಳಲ್ಲಿರುವ ಕಲಿಕಾ ನೂನ್ಯತೆ ಗುರುತಿಸಿ ಎಲ್ಲ ಮಕ್ಕಳಂತೆ ವಿದ್ಯಾಭ್ಯಾಸದಲ್ಲಿ ಮುಖ್ಯವಾಹಿನಿಗೆ ತರುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿ ಎಂದು ಮಕ್ಕಳ ಮಾನಸಿಕ ತಜ್ಞ ವೈದ್ಯೆ ಡಾ. ಪ್ರೀತಿ ಪೈ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಹಾಗೂ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಹಯೋಗದಲ್ಲಿ ಕಲಿಕೆ ಅಂಗವೈಕಲ್ಯದ ಕುರಿತು ಪೋಷಕರು ಹಾಗೂ ಶಿಕ್ಷಕರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಕೆಯಲ್ಲಿ ಆಸಕ್ತಿ ಕಳೆದಕೊಂಡಲ್ಲಿ ಮುಂದಿನ ಶೈಕ್ಷಣಿಕ ದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಕಲಿಕೆಯಲ್ಲಿ ಮಕ್ಕಳು ಆಸಕ್ತಿ ಕಳೆದುಕೊಳ್ಳುತ್ತಿರುವುದು ಶಿಕ್ಷಕರು ಮತ್ತು ಪೋಷಕರಿಗೆ ಗಮನಕ್ಕೆ ಬಂದ ಕೂಡಲೇ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಬೇಕು ಎಂದು ತಿಳಿಸಿದರು.
ಶಿಕ್ಷಕರು ಪಠ್ಯಬೋಧನೆ ಮತ್ತು ಕಲಿಕಾ ಚಟುವಟಿಕೆಗಳನ್ನು ನಿರ್ವಹಿಸುವ ಜತೆಯಲ್ಲಿ ಮಕ್ಕಳಲ್ಲಿರುವ ಕಲಿಕಾ ಸಮಸ್ಯೆಯನ್ನು ಗುರುತಿಸಬೇಕು. ಅವರಿಗೆ ಪರಿಹಾರತ್ಮಕ ಬೋಧನೆಯ ಅವಶ್ಯಕತೆ ಇರುತ್ತದೆ. ವೈಯುಕ್ತಿಕ ಬೋಧನೆಯ ಜತೆಯಲ್ಲಿ ವಿಶೇಷ ಗಮನ ವಹಿಸಬೇಕು.
ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸುವುದು ಹೇಗೆ, ಅವರಿಗೆ ತರಬೇತಿ ನೀಡುವುದು ಎಂಬ ಕುರಿತಾಗಿ ಪೋಷಕರು ಹಾಗೂ ಶಿಕ್ಷಕರಿಗೆ ಜಾಗೃತಿ ಮೂಡಿಸುವ ಆಶಯದಿಂದ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಕ್ಷಕರು, ಪೋಷಕರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಡಾ. ಪೂಜಾ ಝಾ ನಾಯರ್, ಡಾ. ಮೃದುಲಾ, ಸುಮಾಸಿಂಗ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಾಗಾರದಲ್ಲಿ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ, ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್, ಎ.ಎಂ.ಸುರೇಶ್, ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಕಾರ್ಯದರ್ಶಿ ಅನಿಲ್ ಶೆಟ್ಟಿ, ಯೋಜನಾ ನಿರ್ದೇಶಕಿ ವೀಣಾ ಸುರೇಶ್, ಪ್ರತಿಭಾ ಅರುಣ್, ಜಿ.ವಿಜಯ್‌ಕುಮಾರ್, ಡಿಡಿಪಿಯು ಚಂದ್ರಶೇಖರಯ್ಯ ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ