ಶಿವಮೊಗ್ಗ ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ದಿಗೆ ಆಗ್ರಹಿಸಿ, ಅದೇ ಶಾಲೆಯ ಆರ್.ಜಿ.ಉದಯ ಕುಮಾರ್ ಎಂಬ ವಿದ್ಯಾರ್ಥಿ ಡಿಸಿ ಕೆ.ಬಿ.ಶಿವಕುಮಾರ್ ರವರ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಬುಧವಾರ ಮನವಿ ಪತ್ರ ಅರ್ಪಿಸಿದ್ದಾನೆ.
ಶಾಲೆಯಲ್ಲಿ 1 ರಿಂದ 7 ನೇ ತರಗತಿಯಿದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಬಹುತೇಕ ಬಡ, ಕೂಲಿ ಕಾರ್ಮಿಕ, ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆಯಿದೆ.
ಶಾಲಾ ಆವರಣದಲ್ಲಿ ಆಟದ ಮೈದಾನವಿಲ್ಲ. ಇದರಿಂದ ಆಟೋಟ ಚಟುಟವಟಿಕೆಗಳಲ್ಲಿ ಭಾಗಿಯಾಗಲು ಆಗುತ್ತಿಲ್ಲ. 7 ನೇ ತರಗತಿಯವರೆಗಿದ್ದರೂ ಕೇವಲ ಮೂರು ಕೊಠಡಿಗಳು ಮಾತ್ರವಿದೆ. ಕಿಷ್ಕಂಧೆಯಂತಹ ಪರಿಸ್ಥಿತಿಯಿದೆ.
ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆ ಸೇರಿದಂತೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯಿಲ್ಲ. ಇದರಿಂದ ಆಧುನಿಕ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ.
ಗೆಜ್ಜೇನಹಳ್ಳಿ ಸುತ್ತಮುತ್ತಲಿನ ಗ್ರಾಮ ಹಾಗೂ ಬಡಾವಣೆಗಳಲ್ಲಿ ಸರ್ಕಾರಿ – ಖಾಸಗಿ ಪ್ರೌಢಶಾಲೆಯಿಲ್ಲ. 8 ನೇ ತರಗತಿಗೆ ಶಿವಮೊಗ್ಗ ನಗರಕ್ಕೆ ಹೋಗಬೇಕಾಗಿದೆ. ಈ ಕಾರಣದಿಂದ ಕೆಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸುವಂತಾಗಿದೆ.
ಶಾಲೆಗೆ ಸೇರಿದ 3 ಎಕರೆ ಜಾಗವಿದೆ. ಈ ಜಾಗದಲ್ಲಿ ಆಟದ ಮೈದಾನ, ಹೈಸ್ಕೂಲ್ ಸೇರಿದಂತೆ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಬೇಕು. ಈ ಮೂಲಕ ಬಡ, ಕೂಲಿಕಾರ್ಮಿಕ, ಮಧ್ಯಮ ವರ್ಗದ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆಯುವ ವ್ಯವಸ್ಥೆ ಮಾಡಬೇಕು.
ಹಾಗೆಯೇ ಆಸಕ್ತರಿಗೆ ಶಾಲೆಯಲ್ಲಿ ಸ್ಫೋಕನ್ ಇಂಗ್ಲಿಷ್ ಕಲಿಕೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಕಲ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಪತ್ರದಲ್ಲಿ ವಿದ್ಯಾರ್ಥಿ ಒತ್ತಾಯಿಸಿದ್ದಾನೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ