ನಮ್ಮ ಮನಸ್ಸು ಮತ್ತು ದೇಹದ ಆರೋಗ್ಯ ಅದರಲ್ಲೂ ಮುಖ್ಯವಾಗಿ ಹೃದಯದ ಬಗ್ಗೆ ಕಾಳಜಿ ವಹಿಸಿದಷ್ಟು ನಾವು ಆರೋಗ್ಯವಾಗಿರುತ್ತೇವೆ. ಆದ್ದರಿಂದ ನಾವೆಲ್ಲ ಉತ್ತಮ ಜೀವನಶೈಲಿ ಮತ್ತು ನಿಯಮಿತ ವ್ಯಾಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಸಿದ್ದಪ್ಪ ಓ.ಎಸ್ ತಿಳಿಸಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸುಬ್ಬಯ್ಯ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಸಿಮ್ಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಸೇರಿದಂತೆ ಎಲ್ಲ ವಯೋಮಾನದ ಜನರು ಪ್ರಸ್ತುತ ಹೃದ್ರೋಗ, ಹೃದಯಾಘಾತಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಆದ ಕಾರಣ ಸುಸ್ತು, ಬೆವರುವುದು, ಮೇಲ್ಭಾಗದ ಹೊಟ್ಟೆಯಲ್ಲಿ ತೊಂದರೆಯುಂಟಾದರೆ ತಾವೇ ಗ್ಯಾಸ್ ಅಥವಾ ಇತರೆ ಸಮಸ್ಯೆ ಇರಬಹುದು ಎಂದು ಸ್ವಯಂ ಔಷಧೋಪಚಾರ ಮಾಡುವ ಬದಲು ತಕ್ಷಣ ಇಸಿಜಿ ಮಾಡಿಸಬೇಕೆಂದು ಸಲಹೆ ನೀಡಿದರು.
2012-13 ನೇ ಸಾಲಿನಿಂದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹೃದ್ರೋಗ ವಿಭಾಗ ಆರಂಭಿಸಲು ಪ್ರಯತ್ನಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಇದು ಸಾಕಾರಗೊಂಡಿದೆ. ಸಂಸ್ಥೆಯಲ್ಲಿ ಉತ್ತಮ ಕಾರ್ಡಿಯಾಲಜಿ ವಿಭಾಗ ಸ್ಥಾಪನೆಗೊಂಡಿದೆ. ಇದಕ್ಕೆ ಸಹಕರಿಸಿದ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇನ್ನೊಂದು ವರ್ಷದಲ್ಲಿ ಎಂಸಿಎ ನಿಯಮಾವಳಿಯನ್ವಯ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲಾಗುವುದು. ಈಗಾಗಲೇ 04 ಜನ ಕಾರ್ಡಿಯಾಲಜಿ ತಜ್ಞ ವೈದ್ಯರನ್ನು ನೇಮಿಸಲು ಅಧಿಸೂಚಿಸಲಾಗಿದೆ. ಈ ನಾಲ್ಕು ಹುದ್ದೆ ತುಂಬಿದರೆ ಪೂರ್ಣ ಪ್ರಮಾಣದಲ್ಲಿ ವಿಭಾಗ ಕೆಲಸ ಮಾಡಬಹುದು. ಜೊತೆಗೆ 50 ಬೆಡ್ ಹೃದ್ರೋಗ ಆಸ್ಪತ್ರೆ ಮಂಜೂರಾಗಿದ್ದು ಅನುಸರಣೆ ಹಂತದಲ್ಲಿದೆ. ರೇಡಿಯಾಲಜಿ ವಿಭಾಗ ಕೂಡ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ಸಂಸ್ಥೆಯಲ್ಲಿ ಉತ್ತಮ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದಾರೆ. ಆದರೆ ಶುಶ್ರೂಷಕರ 95 ಹುದ್ದೆ ಖಾಲಿ ಇದ್ದು ಈ ಹುದ್ದೆಗಳನ್ನು ತುಂಬುವ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದ ಅವರು ಸರ್ಕಾರ ಸಂಸ್ಥೆಗೆ 150 ‘ಡಿ’ ಗ್ರೂಪ್ ಹುದ್ದೆಯನ್ನು ಮಂಜೂರು ಮಾಡಿರುವುದು ಸಂತಸದ ವಿಚಾರ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ವಿಶ್ವದಲ್ಲಿ ಪ್ರಸ್ತುತ ಸುಮಾರು 520 ಮಿಲಿಯನ್ ಜನರು ಒಂದಲ್ಲ ಒಂದು ರೀತಿಯ ಹೃದ್ರೋಗಕ್ಕೆ ಒಳಗಾಗಿದ್ದಾರೆ. ಶೇ.80 ಸಾವು ಹೃದಯ ಸ್ತಂಭನ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದಂತೆ ಸಂಭವಿಸುತ್ತಿದೆ. 25 ವರ್ಷದೊಳಗಿನ ಯುವಜನತೆ ಸಹ ಹೃದ್ರೋಗಕ್ಕೆ ಒಳಗಾಗುತ್ತಿರುವುದು ಖೇದಕರ ಸಂಗತಿಯಾಗಿದ್ದು ಇದಕ್ಕೆಲ್ಲ ಪ್ರಮುಖ ಕಾರಣ ಜೀವನಶೈಲಿ, ತಂಬಾಕು ವಸ್ತುಗಳ ಸೇವನೆ, ಅನಾರೋಗ್ಯಕರ ಆಹಾರ ಪದ್ದತಿ ಮತ್ತು ಒತ್ತಡವಾಗಿದೆ.
ಯಾಂತ್ರಿಕ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಉತ್ತಮ ಆಹಾರ ಪದ್ದತಿಯೊಂದಿಗೆ ಆರೋಗ್ಯಕ್ಕೆ ಅಗತ್ಯವಾದ ವ್ಯಾಯಾಮ, ವಾಯುವಿಹಾರದಂತಹ ಒಳ್ಳೆಯ ಅಭ್ಯಾಸಗಳನ್ನು ಎಲ್ಲರೂ ರೂಢಿಸಿಕೊಳ್ಳುವುದರ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಸಿಮ್ಸ್ ಕಾರ್ಡಿಯಾಲಜಿ ವಿಭಾಗದ ಡಾ.ಪರಮೇಶ್ವರಪ್ಪ ಡಿ.ಎಂ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾನ್ಯರ ದೇಹದಲ್ಲಿ ದಿನಕ್ಕೆ 1.15 ಲಕ್ಷ ಬಾರಿ ಬಡಿಯುವ, 6 ಲೀಟರ್ ರಕ್ತವನ್ನು ಪಂಪ್ ಮಾಡಿ ದೇಹದ ಮುಖ್ಯ ಭಾಗಗಳಿಗೆ ಸರಬರಾಜು ಮಾಡುತ್ತಾ ಅವಿರತ ದುಡಿಯುವ ನಮ್ಮ ಹೃದಯವನ್ನು ನಾವು ಸಂರಕ್ಷಿಸಬೇಕು. ಪ್ರಸ್ತುತ ಹೃದ್ರೋಗ ವಿಶ್ವದ ನಂ.1 ಪಾತಕಿಯಾಗಿದೆ. ಆದ ಕಾರಣ ವಿಶ್ವ ಆರೋಗ್ಯ ಸಂಸ್ಥೆಯು ಹೃದಯ ರೋಗಗಳ ಬಗ್ಗೆ ಅರಿವು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು 1999 ನೇ ಸಾಲಿನಿಂದ ಪ್ರತಿ ವರ್ಷ ಸೆ.29 ರಂದು ವಿಶ್ವ ಹೃದಯ ದಿನಾಚರಣೆ ಹಮ್ಮಿಕೊಂಡು ಪ್ರತಿ ವರ್ಷ ಒಂದೊಂದು ಘೋಷವಾಕ್ಯದೊಂದಿಗೆ ಆಚರಣೆ ಮಾಡುತ್ತಾ ಬಂದಿದೆ. ಪ್ರಸ್ತುತ ವರ್ಷದ ಘೋಷಣೆ ‘ಹೃದಯದಿಂದ ಬಾಂಧವ್ಯ ಬೆಸೆಯೋಣ’ ಎಂಬುದಾಗಿದ್ದು, ಪ್ರೀತಿಯ, ಬಾಂಧವ್ಯದ ಸಂಕೇತವಾದ ಹೃದಯದ ಆರೋಗ್ಯದ ಬಗ್ಗೆ ನಾವೆಲ್ಲ ಎಚ್ಚೆತ್ತುಕೊಂಡು, ಕಾಪಾಡಿಕೊಳ್ಳೋಣ ಎಂದರು.
ವೇದಿಕೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ ಓ, ಆರ್‍ಸಿಹೆಚ್‍ಓ ನಾಗರಾಜ್ ನಾಯಕ್, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ಕಟ್ಟಿ.ಎಂ.ಡಿ, ಡಾ.ಮಹೇಶ್ ಮೂರ್ತಿ, ಇತರೆ ವೈದ್ಯರು ಉಪಸ್ಥಿತರಿದ್ದರು. ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್.ಎಸ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಹಿಮ ಮತ್ತು ಅನುಕೂಲ್ ನಿರೂಪಿಸಿದರು. ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ವಂದಿಸಿದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ