ಮಾರಿಕಾಂಬ ಮೈಕ್ರೋಫೈನಾನ್ಸ್

ಶ್ರೀಗಂಧ ಸಂಸ್ಥೆ

ಶ್ರೀ ಶನೇಶ್ವರ ದೇವಾಲಯ ಟ್ರಸ್ಟ್…

ಶಿವಮೊಗ್ಗ : ಧರ್ಮ ಪ್ರಜ್ಞೆ ಇದ್ದರೆ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮನ್ನು ಏನೂ ಮಾಡುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿ ಹಾಗೂ ನಮ್ಮ ಸ್ವಂತಿಕೆಯನ್ನು ಉಳಿಸಬಹುದಾಗಿದೆ ಎಂದು ಗೌರಿಗದ್ದೆ ಶ್ರೀ ವಿನಯ ಗುರೂಜಿ ಹೇಳಿದರು.

ಮಾರಿಕಾಂಬ ಮೈಕ್ರೋ ಫೈನಾನ್ಸ್, ಶ್ರೀಗಂಧ ಹಾಗೂ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಶುಭಮಂಗಳ ಸಮುದಾಯ ಭವನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನವರಾತ್ರಿ ಉತ್ಸವದ ನಂತರ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ. ಎಲ್ಲರೂ ಒಂದೆಡೆ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ನೆರೆ ಹೊರೆಯವರಿಗೆ ಸ್ಫೂರ್ತಿ ಬರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ತಮಗೂ ಒಳ್ಳೆಯದಾಗಬಹುದೆಂದು ಅನಿಸುತ್ತದೆ. ಈ ಮೂಲಕ ಸಂಸ್ಕಾರ ದೊರೆಯಲಿದೆ ಎಂದರು.

ಆರ್‌ಎಸ್‌ಎಸ್‌ನಿಂದ ಜೀವನ ಪಾಠ ಕಲಿತ ಈಶ್ವರಪ್ಪ ಇಂದು ಪ್ರತಿಯೊಬ್ಬರಿಂದಲೂ ಕಲಿಯುವುದು ಇರುತ್ತದೆ. ಕಲಿಯುತ್ತಾ ಕಲಿಯುತ್ತಾ ಜೀವನ ಪರಿಪೂರ್ಣವಾಗುತ್ತಾ ಹೋಗುತ್ತದೆ. ಅಂತಹ ಕಲಿಕಾ ಶಾಲೆಯಾದ ಆರ್‌ಎಸ್‌ಎಸ್‌ನಿಂದ ಈಶ್ವರಪ್ಪನವರು ಜೀವನ ಪಾಠ ಕಲಿತಿದ್ದು, ಸಂಸ್ಕಾರ ಮೈಗೂಡಿಸಿಕೊಂಡಿದ್ದಾರೆ. ಇದರಿಂದಾಗಿಯೇ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಜನರನ್ನು ಪ್ರೇರೇಪಿಸುತ್ತಿದ್ದಾರೆ ಎಂದರು. ಧರ್ಮ, ಅರ್ಥ, ಕಾಮ, ಮೋಕ್ಷ ಇವರು ನಾಲ್ಕನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವುಗಳ ಸರಿಯಾದ ಅರ್ಥ ತಿಳಿದುಕೊಂಡು ಬದುಕಿದರೆ ಜೀವನದಲ್ಲಿ ಯಶಸ್ಸು ಸಾಧ್ಯ. ನವರಾತ್ರಿ ಸ್ವರೂಪವೇ ಹೆಣ್ಣು. ಹೆಣ್ಣಿನ ಜೀವನದ ಹಂತಗಳನ್ನು ನವರಾತ್ರಿ ಉತ್ಸವದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾರಿಕಾಂಬಾ ಫೈನಾನ್ಸ್ ಖಜಾಂಚಿ ಕೆ.ಇ. ಕಾಂತೇಶ್, ಸಂಸ್ಥೆಯ ಸದಸ್ಯರಿಗಾಗಿ ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸಂಸ್ಥೆಯ ಸದಸ್ಯರು ಇನ್ನಷ್ಟು ಹಮ್ಮಸ್ಸಿನಿಂದ ಕೆಲಸ ಮಾಡಲು ಪ್ರೇರಣೆಯಾಗುತ್ತಿದೆ ಎಂದರು.

ಸಂಸ್ಥೆ ಆರಂಭವಾಗಿ 6 ವರ್ಷಗಳು ಕಳೆದಿದ್ದು, 1600 ಸ್ವಯಂಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 12 ಸಾವಿರ ಸದಸ್ಯರಿದ್ದು, 54 ಕೋಟಿ ರೂ. ಸಾಲ ನೀಡಲಾಗಿದೆ. ಯಾವ ಸದಸ್ಯರೂ ಕೂಡ ಒಂದೇ ಒಂದು ಕಂತು ಬಾಕಿ ಉಳಿಸಿಕೊಳ್ಳದೆ ಸಾಲ ಮರು ಪಾವತಿ ಮಾಡುತ್ತಿದ್ದಾರೆ ಎಂಬುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದರು.
ಡಾ.ಶ್ರೀ ಮಹರ್ಷಿ ಆನಂದ ಗುರೂಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಚಿವರೂ ಆದ ಸಂಸ್ಥೆ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪತ್ನಿ ಸತ್ಯವತಿ, ಮಹಾಪೌರರಾದ ಸುನೀತಾ ಅಣ್ಣಪ್ಪ, ಉಪಮಹಾಪೌರರಾದ ಗನ್ನಿಶಂಕರ್, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಚೆನ್ನಿ, ಜ್ಞಾನೇಶ್ವರ್, ಎನ್.ಜೆ. ರಾಜಶೇಖರ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…