ಶಿವಮೊಗ್ಗ ನ್ಯೂಸ್…
ಸಂಭ್ರಮದ ಹಬ್ಬವಾದ ಭೂಮಿ ಹುಣ್ಣಿಮೆಯನ್ನು ಇಂದು ರೈತರು ತಮ್ಮ ಹೊಲಗದ್ದೆಗಳಲ್ಲಿ ಆಚರಿಸಿದರು. ಭೂಮಿ ಹುಣ್ಣಿಮೆ ರೈತರ ಪಾಲಿಗೆ ಪವಿತ್ರ ಪೂಜೆಯಾಗಿದೆ. ಹೊಲ, ಗದ್ದೆ, ತೋಟಗಳಲ್ಲಿ ಬೆಳೆದು ನಿಂತ ಫಸಲಿಗೆ ವಿಶೇಷವಾಗಿ ಸೀರೆ ಕುಬುಸ ತೊಡಿಸುತ್ತಾರೆ. ವಿಶೇಷ ಆಭರಣಗಳ, ಹೂವುಗಳಿಂದ ಅಲಂಕರಿಸಿ ಚಪ್ಪರಕಟ್ಟಿ ಭೂರಮೆಯನ್ನು ಸಿಂಗರಿಸುತ್ತಾರೆ. ಭೂಮಿ ತಾಯಿಯ ಸೀಮಂತ ಪೂಜೆ ಎಂದೇ ನಂಬಿಕೊಂಡಿರುವ ರೈತರು ಅದೇ ರೀತಿಯಲ್ಲಿ ಪೂಜಿಸುತ್ತಾರೆ. ವಿವಿಧ ಬಗೆಯ ಅಡುಗೆಗಳನ್ನು ಸಿದ್ಧಪಡಿಸಿ ಎಡೆಯನ್ನು ಮಾಡಿ ಚರಗವನ್ನು ಚೆಲ್ಲಿ ಸಂಭ್ರಮದಿಂದ ಭೂಮಿ ಹುಣ್ಣಿಮೆ ಆಚರಿಸುತ್ತಾರೆ.
ಭೂಮಿ ತಾಯಿ ಸೇವಿಸಲಿ ಎಂದು ಎಡೆಯನ್ನು ಮಣ್ಣಿನಲ್ಲಿ ಹೂಳುತ್ತಾರೆ. ಅಷ್ಟೇ ಅಲ್ಲ, ಗದ್ದೆ ಮತ್ತು ತೋಟದ ಬದುಗಳಲ್ಲಿ ಹರಿಯುತ್ತಿರುವ ಸಣ್ಣ ಸಣ್ಣ ಕಾಲುವೆಗಳಿಗೆ ಹೋಗಿ ಎಡೆಯನ್ನು ಮೀನುಗಳಿಗೆ ಆಹಾರವಾಗಿ ಹಾಕುತ್ತಾರೆ. ಫಸಲಿಗೆ ಪುಟ್ಟ ಮಂಟಪ ನಿರ್ಮಿಸಿ ಬಾಳೆ ಗೊನೆಗಳನ್ನಿಟ್ಟು ಮಹಿಳೆಯರು ತಮ್ಮ ತಾಳಿಗಳನ್ನು ತೆಗೆದು ಭೂಮಿ ತಾಯಿಗೆ ಕಟ್ಟುತ್ತಾರೆ. ಕಾಗೆಗಳು ಸೇರಿದಂತೆ ಇತರೆ ಪ್ರಾಣಿ ಪಕ್ಷಿಗಳಿಗೂ ಸಹ ಎಡೆಯನ್ನು ಅರ್ಪಿಸುತ್ತಾರೆ. ಇಡೀ ಕುಟುಂಬದವರಲ್ಲದೇ ತಮ್ಮ ಗೆಳೆಯರು ನೆರೆ ಹೊರೆಯ ಆಪ್ತರು ಅಕ್ಕಪಕ್ಕದ ಹೊಲದವರನ್ನು ಕರೆದು ಎಲ್ಲರೂ ಒಟ್ಟಾಗಿ ಊಟ ಮಾಡುವುದೇ ಒಂದು ಸೊಗಸು ಹಬ್ಬದ ನೆಪದಲ್ಲಿ ನಮ್ಮ ತೋಟಗಳಲ್ಲಿ ಬೆಳೆದ ಬೆಳೆಯನ್ನು ನೋಡುವುದೇ ರೈತರಿಗೆ ಸಂಭ್ರಮ.
ಇದೊಂದು ಅಪರೂಪದ ಹಬ್ಬವಾಗಿದೆ. ಮಲೆನಾಡು ಭಾಗದಲ್ಲಿ ಇದರ ಆಚರಣೆ ಹೆಚ್ಚಾಗಿದೆ. ಇಂದು ಶಿವಮೊಗ್ಗ ಜಿಲ್ಲೆ ಎಲ್ಲಾ ಕಡೆ ರೈತರು ಭೂಮಿ ಹುಣ್ಣಿಮೆ ಆಚರಿಸಿದ್ದಾರೆ. ತಮ್ಮ ಕಷ್ಟ ಬಗೆಹರಿಸಲು ಭೂಮಿ ತಾಯಿಯನ್ನು ಬೇಡಿಕೊಂಡಿದ್ದಾರೆ.