ಶಿವಮೊಗ್ಗ ನ್ಯೂಸ್…

ವಿಶ್ವದ ಜನಪ್ರಿಯ ನಾಯಕ ಮೋದಿ ಅವರನ್ನು ಹೆಬ್ಬೆಟ್ಟು ಗಿರಾಕಿ ಎಂದ ಸಿದ್ಧರಾಮಯ್ಯ ದೇಶದ ಜನರ ಕ್ಷಮೆಯನ್ನು ಮೊದಲು ಯಾಚಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಹುಲ್ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಎಂಬ ಪದ ಬಳಸಿದ್ದಕ್ಕೆ ಕಾಂಗ್ರೆಸ್ ನವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಟ್ಟದಾಗಿ ಟೀಕೆಯನ್ನು ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಅನ್ನಿಸಿಕೊಳ್ಳುವ ಪಕ್ಷವಲ್ಲ. ಪಕ್ಷ ದೇಶಾದ್ಯಂತ ಸದೃಢವಾಗಿ ಬೆಳೆದಿದೆ ಎಂದರು. ಹಿಂದೆ ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಜಯಗಳಿಸಿದಾಗ, ವಿಪಕ್ಷ ನಾಯಕರಾದ ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು ದುರ್ಗೆ ಎಂದು ಹೊಗಳಿ ಅವರು ನಮ್ಮ ದೇಶದ ನಾಯಕಿ. ನಮ್ಮ ಸಂಪೂರ್ಣ ಬೆಂಬಲ ಅವರಿಗಿದೆ ಎಂದು ಹೊಗಳಿದ್ದರು. ಆದರೆ, ಈಗಿನ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದರು.

ದೇಶದ ಸರ್ವೋಚ್ಛ ನಾಯಕ ಮೋದಿಯನ್ನು ಹೆಬ್ಬೆಟ್ಟು ಗಿರಾಕಿ ಎಂದರೆ ನಾವು ಸುಮ್ಮನಿರಬೇಕಾ? ನಮಗೂ ಬೇಕಾದಷ್ಟು ಪದ ಬಳಕೆ ಮಾಡಲು ಬರುತ್ತದೆ. ಇಡೀ ದೇಶದ ಜನರಿಗೆ ಈ ಹೇಳಿಕೆಯಿಂದ ನೋವಾಗಿದೆ. ರಾಹುಲ್ ಗಾಂಧಿ ಬಗ್ಗೆ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್ ಅವರನ್ನು ನಿಮ್ಹಾನ್ಸ್ ಗೆ ಸೇರಿಸಿ ಎನ್ನುವ ಸಿದ್ಧರಾಮಯ್ಯನವರು ಹೆಬ್ಬೆಟ್ಟು ಗಿರಾಕಿ ಎಂದು ಹೇಳಿದಾಗ ಅವರನ್ನು ಯಾವ ಆಸ್ಪತ್ರೆಗೆ ಸೇರಿಸಿದರೂ ಕೂಡ ಗುಣವಾಗುವ ಕಾಯಿಲೆಯಲ್ಲ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಮೋದಿ ಬಗ್ಗೆ ಧಿಮಾಕಿನ ಮಾತನಾಡಿದಾಗ ನಮ್ಮ ರಾಜ್ಯಾಧ್ಯಕ್ಷರು ಆ ಮಾತನ್ನು ಹೇಳಿದ್ದಾರೆ. ಮೊದಲು ಸಿದ್ಧರಾಮಯ್ಯನವರು ಜನರ ಕ್ಷಮೆ ಕೇಳಲಿ ಎಂದರು.ಆರ್.ಎಸ್.ಎಸ್. ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಟೀಕೆಗೆ ಉತ್ತರಿಸಿದ ಅವರು ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಹುಡುಕಬೇಕು.

ಕುಂಟನೊಬ್ಬ ಕಟ್ಟಿ ಪೈಲ್ವಾನನೊಂದಿಗೆ ಹೋರಾಟ ಮಾಡಿದಂತೆ ಜೆಡಿಎಸ್ ಕತೆಯಾಗಿದೆ. ಆರ್.ಎಸ್.ಎಸ್. ಅನ್ನು ನಿರಂತರವಾಗಿ ತೆಗಳಿದರೆ ತಮಗೆ ಜನ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ಕಾಂಗ್ರೆಸ್ ನವರಿಗೆ ಇನ್ನೂ ಕೂಡ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನ ಹಲವಾರು ಬಣಗಳಾಗಿವೆ. ಸಿದ್ಧರಾಮಯ್ಯನವರ ಆಪ್ತರಾದ ಸಲೀಂ ಮತ್ತು ಉಗ್ರಪ್ಪನವರು ಡಿ.ಕೆ. ಶಿವಕುಮಾರ್ ಬಗ್ಗೆ ಹೇಳಿಕೆ ನೀಡಿದಾಗ ಸಲೀಂ ವಿರುದ್ಧ ಕ್ರಮ ಕೈಗೊಂಡ ಕಾಂಗ್ರೆಸ್ ಉಗ್ರಪ್ಪನವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.ಅಲ್ಪಸಂಖ್ಯಾತರ ಪರ ಎನ್ನುವ ಕಾಂಗ್ರೆಸ್ ನವರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾತನಾಡಿದ ಸಲೀಂ ಅವರನ್ನು ಪಕ್ಷದಿಂದ ಅಮಾನತು ಮಾಡಿದರು.

ಆದರೆ, ಸಿದ್ಧರಾಮಯ್ಯನವರ ಪಟ್ಟ ಶಿಷ್ಯ ಉಗ್ರಪ್ಪನವರ ಮೇಲೆ ಕ್ರಮ ಕೈಗೊಂಡಿಲ್ಲ ಏಕೆ ಎಂದು ಕೇಳಿದರು. ರಾಜ್ಯಾಧ್ಯಕ್ಷರ ವಿರುದ್ಧ ಹೇಳಿಕೆ ನೀಡಿದಾಗಲೂ ಸಿದ್ಧರಾಮಯ್ಯ ತುಟಿಕ್ ಪಿಟಿಕ್ ಎನ್ನಲಿಲ್ಲ ಏಕೆ? ಇದು ಅವರ ಪಕ್ಷದ ಒಡಕನ್ನು ತೋರಿಸುತ್ತದೆ ಎಂದರು.ದೇವೇಗೌಡರು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅವರು ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ಬೆಳೆಸಿದರೆ ತಪ್ಪೇನಿಲ್ಲ. ಆದರೆ, ರಾಷ್ಟ್ರೀಯ ಪಕ್ಷ ಕಾಂಗ್ರೆಸೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿದೆ ಎಂದು ಲೇವಡಿ ಮಾಡಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…