ಶಿವಮೊಗ್ಗ ನ್ಯೂಸ್…
ಪ್ರತಿ ಮನೆ ಮನೆಗಳಲ್ಲಿಯೂ ಸ್ವಚ್ಛತೆಯ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು.
ಶಿವಮೊಗ್ಗ ನಗರದ ಕಾಶೀಪುರದಲ್ಲಿ ನೆಹರು ಯುವ ಕೇಂದ್ರ, ಮಹಾನಗರ ಪಾಲಿಕೆ, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ, ಪಶು ವೈದ್ಯಕೀಯ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ ಮತ್ತು ಪ್ಲಾಸ್ಟಿಕ್ ನಿರ್ಮೂಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಯಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾರ್ವಜನಿಕರ ಸಹಕಾರ ಅತ್ಯಂತ ಅವಶ್ಯಕವಾಗಿರುತ್ತದೆ. ಕಸವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಪರಿಸರ ಹಾಳಾಗುತ್ತದೆ. ಆದ್ದರಿಂದ ಕಸವನ್ನು ಕಸ ಸಂಗ್ರಹ ವಾಹನಗಳಿಗೆ ನೀಡಬೇಕು. ಸ್ವಚ್ಛತೆ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಾಳಿ ಅವರು ಪ್ಲಾಸ್ಟಿಕ್ ನಿರ್ಮೂಲನೆ ವಿಷಯ ಕುರಿತು ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ಅವರು ಸ್ವಚ್ಛ ಭಾರತ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಯುವ ಸಮೂಹ ಹೆಚ್ಚಿನ ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಬಗ್ಗೆ ಬೀದಿನಾಟಕ ಪ್ರದರ್ಶಿಸಲಾಯಿತು. ಕಾಶೀಪುರ ಮತ್ತು ಸುತ್ತಮುತ್ತಲಿನ ಬಡಾವಣೆಗಳಲ್ಲಿ ಜಾಥಾ ನಡೆಸಲಾಯಿತು.
ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ಪ್ರಕಾಶ್, ನೆಹರು ಯುವಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್, ಲೆಕ್ಕಾಧಿಕಾರಿ ರಮೇಶ್, ಡಾ. ಪರಿಸರ ನಾಗರಾಜ್, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ತುಕರಾಂ ಗೌಡ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್‌ಚಂದ್ರ, ಧೂಳಪ್ಪ, ಡಾ. ವೆಂಕಟೇಶ್, ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯ್‌ಕುಮಾರ್, ಟಿ.ಎಸ್.ಮಹಾದೇವಸ್ವಾಮಿ, ಹಾಲಾನಾಯ್ಕ್, ಶೇಖ್ ಹಸನ್, ದುತೇಂದ್ರ ಮತ್ತಿತರರು ಇದ್ದರು.