ಶಿವಮೊಗ್ಗ ನ್ಯೂಸ್…

ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ನಿರ್ಧಾರ ಹಿಂತೆಗೆದುಕೊಳ್ಳಲು ಆಗ್ರಹಪಡಿಸಿ ಇದುವರೆಗೆ ಮಾಡಿದ ವಿವಿಧ ಸ್ವರೂಪದ ಹೋರಾಟಗಳಿಗೆ ನಗರಪಾಲಿಕೆ ಮಣಿಯದ ಕಾರಣ ಕಾನೂನು ಹೋರಾಟದ ಮೂಲಕವೇ ಪರಿಹಾರ ಕಂಡುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ.

ಅವೈಜ್ಞಾನಿಕ ತೆರಿಗೆ ಹೆಚ್ಚಳವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಸಿ ಅರ್ಜಿ ಸಲ್ಲಿಸಲು ನಿನ್ನೆ ಸಂಜೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆದ
ತೆರಿಗೆದಾರರ ಸಮಾಲೋಚನಾ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.ಕಾನೂನು ಸಮರದ ಶುಲ್ಕವನ್ನು ತೆರಿಗೆ ಪಾವತಿದಾರರಿಂದ ವಂತಿಕೆ ಸಂಗ್ರಹ ಮಾಡಬೇಕು.ಆರ್ಥಿಕ ಸ್ಥಿತಿವಂತರು, ಅತ್ಯಧಿಕ ತೆರಿಗೆ ಪಾವತಿದಾರರನ್ನು ಮನವೊಲಿಸಿ ಅಂತವರಿಂದ
ಹೆಚ್ಚಿನ ದೇಣಿಗೆ ಪಡೆಯಬೇಕು ಎಂದು ಸಭೆ ನಿರ್ಧರಿಸಿದೆ.

ಇದುವರೆಗೆ ಪ್ರತಿಭಟನೆ, ಪತ್ರ ಚಳುವಳಿ ನಡೆಸಿದರೂ ನಗರಪಾಲಿಕೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.ಈಗಾಗಲೇ ಹುಬ್ಬಳ್ಳಿ, ಬೆಳಗಾವಿ, ಹೊಸಪೇಟೆ, ಬಳ್ಳಾರಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆದಾರರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ನಾವೂ ಅದೇ ಹಾದಿ ತುಳಿಯುವುದು ಒಳಿತು. ನಮಗೆ ಸ್ಪಂದಿಸದ ಪಾಲಿಕೆ ಜನಪ್ರತಿನಿಧಿಗಳಿಗೆ ಕಾನೂನು ಮೂಲಕವೇ ಉತ್ತರ ನೀಡೋಣ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ಅಭಿಪ್ರಾಯಪಟ್ಟರು.ಕೊರೋನಾ ಕಾರಣ ಎರಡು ವರ್ಷಗಳಿಂದ ವ್ಯಾಪಾರ, ವಹಿವಾಟು ಕುಸಿದು ಜೀವನ ನಿರ್ವಹಣೆಯೇ ಕಷ್ಟವಾಗಿದೆ.

ಈ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡ ತೆರಿಗೆ ಪಾವತಿದಾರರು ಬೇಸರ ವ್ಯಕ್ತಪಡಿಸಿದರು.ಇದುವರೆಗೆ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಒಕ್ಕೂಟದಿಂದ ನಡೆಸಿದ ಹೋರಾಟಗಳ ಬಗ್ಗೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ಕೆ.ವಿ.ವಸಂತಕುಮಾರ್ ವಿವರಣೆ ನೀಡಿ ಹೊಸ ತೆರಿಗೆ ವ್ಯವಸ್ಥೆ ಜಾರಿಯಾದರೆ ನಾಗರಿಕರಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ವಿವರಿಸಿದರು.

ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ನಗರಪಾಲಿಕೆ ಸಭೆಗಳಲ್ಲಿ ಸಮರ್ಪಕವಾದ ಚರ್ಚೆಗಳೇ ನಡೆದಿಲ್ಲ. ಮೇಯರ್, ಆಯುಕ್ತರು ಸೇರಿದಂತೆ ಪಾಲಿಕೆ ಸದಸ್ಯರಿಗೇ ಇದರ ಬಗ್ಗೆ
ಸ್ಪಷ್ಟತೆಯಿಲ್ಲ. ತೆರಿಗೆ ಹೆಚ್ಚಳ ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮೇಯರ್ ಹಾಗೂ ಆಯುಕ್ತರು ಭರವಸೆ ನೀಡಿದ್ದರು. ಆದರೆ ಇದುವರೆಗೆ ಪತ್ರ ಬರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆಸ್ತಿ ತೆರಿಗೆ ದರಪಟ್ಟಿಯೂ 500 ಪುಟಗಳನ್ನು ಮೀರಿದೆ.ಅಧಿಕಾರಿಗಳು ಇದರ ಬಗ್ಗೆ ಪಾಲಿಕೆ ಸದಸ್ಯರಿಗೂ ಮಾಹಿತಿ ನೀಡದೇ ತೆರಿಗೆ ಹೆಚ್ಚಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಮೊದಲ ಮತ್ತು ಮೇಲ್ಮಹಡಿಗೆ ಇಡೀ ನಗರದಲ್ಲಿ ಒಂದೇ ತೆರಿಗೆ
ವಿಧಿಸಲಾಗುತ್ತಿದೆ. ಒಂದೇ ಬಡಾವಣೆಯ ವಿವಿಧ ರಸ್ತೆಗಳಲ್ಲೂ ತೆರಿಗೆ ಭಿನ್ನವಾಗಿರುವುದು ಆಶ್ಚರ್ಯ ಮೂಡಿಸಿದೆ ಎಂದರು.

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಡಾ.ಸತೀಶ್‌ಕುಮಾರ್ ಶೆಟ್ಟಿ, ಗಾಂಧಿ ಬಜಾರ್ ವರ್ತಕರ ಸಂಘದ ಪದಾಧಿಕಾರಿಗಳು, ಉದ್ಯಮಿ ಪಿ.ರುದ್ರೇಶ್ ಮುಂತಾದವರು ಮಾತನಾಡಿ, ಕಾನೂನು ಹೋರಾಟದ ಅನಿವಾರ್ಯತೆಯನ್ನು
ವಿವರಿಸಿದರು.

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಉಪಾಧ್ಯಕ್ಷ ಅಶ್ವತ್ಥನಾರಾಯಣ ಶೆಟ್ಟಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್,ಕಾರ್ಯದರ್ಶಿ ಗೋಪಿನಾಥ್ ಅಡಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…