ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಎಂದೆಂದಿಗೂ ಕನ್ನಡ
ಎಲ್ಲೆಲ್ಲೂ ಕನ್ನಡ..

ನವೆಂಬರ್ ಬಂತೆಂದರೆ ಕನ್ನಡ..ಕನ್ನಡ..
ಬೇರೆ ದಿನಗಳಲ್ಲಿ…ಎನ್ನಡಾ…
ಕೇಳುವರು…ಇತರರು ಎಕ್ಕಡ.(ಎಲ್ಲಿ)
ಇಂದಿನಿಂದ ತಿಂಗಳಿಡೀ ಕನ್ನಡ..ಕನ್ನಡ.

ನಾಮಫಲಕದಲ್ಲಿರಲೇಬೇಕು ಕನ್ನಡ
ಆದೇಶ ಇಂದು ಮಾತ್ರ ನೆನಪಾಗುವುದು ಸಂಗಡ
ನಾಡ ಭಾಷೆ ಕನ್ನಡ
ಆಡಳಿತ ಭಾಷೆ ಕನ್ನಡ
ನವೆಂಬರ್ ಮಾಸದಲ್ಲಿ ಮಾತ್ರ
ನೆನಪಿನಲ್ಲುಳಿಯುವುದು ಕನ್ನಡ
ಬೇರೆ ದಿನಗಳಲ್ಲಿ..ಎನ್ನಡಾ..ಎಕ್ಕಡ..!!!

ರಾಜ್ಯೋತ್ಸವದ ಆಚರಣೆಯಲ್ಲಿ
ಹಾಡುವ ಹಾಡೆಲ್ಲಾ ಕನ್ನಡ…
ಹಾರುವ ಧ್ವಜ ವು ಕನ್ನಡ..
ಉಳಿದ ದಿನಗಳಲ್ಲಿ ಇರುವುದಿಲ್ಲ..
ಈ ಸಂಭ್ರಮ ಸಡಗರ..
ಬರಿಯ ಆಚರಣೆಯಲ್ಲವೋ..
ಉಸಿರಾಗಬೇಕು..ಕನ್ನಡ..
ಹಚ್ಚ ಹಸಿರಾಗಬೇಕು..ಕನ್ನಡ.

ಎರಡು ಸಹಸ್ರ ವರ್ಷಗಳ ಇತಿಹಾಸವಿರುವ
ಕವಿವರ್ಯರ ಸಾಹಿತ್ಯದಿ ಅರಳಿದ ಕನ್ನಡ
ಕರುನಾಡಿನ ಕರುಳ ಧ್ವನಿಯು ಕನ್ನಡ
ಕಪ್ಪು ಮಣ್ಣಿನ ಘಮದಲ್ಲಿರುವ ಕನ್ನಡ
ಶ್ರೀಗಂಧದ ನಾಡಲಿ ಪಸರಿಸಿರುವ ಕನ್ನಡ
ವೀರ ಧೀರರ ಕೆಚ್ಚೆದೆಯು..ಕನ್ನಡ
ಹರಿಯುವ ಕಾವೇರಿಯ ನಿನಾದವು ಕನ್ನಡ.

ಪರಭಾಷಾವ್ಯಾಮೋಹ ತೊರೆದು
ಉಳಿಸಬೇಕಿದೆ…ಕನ್ನಡ
ತಾಯಿಯ ನುಡಿಯು ಕನ್ನಡ
ಕಂದನ ತೊದಲು ನುಡಿಯು ಕನ್ನಡ
ಕನ್ನಡ…ಕನ್ನಡ…ಬಳಸಿದರೆ..
ಉಳಿಯುವುದು ಭಾಷೆ….
ಭಾಷೆಯ ಭಾವಕ್ಕಿದೆ ತನ್ನದೇ ಮಹಿಮೆ
ನಾವು ಹೊಂದಬೇಕಿದೆ ಒಲುಮೆ..
ಸಿರಿನಾಡಿನ..ಸಿರಿಗನ್ನಡ..
ಉಳಿಸಲು ಕಂಕಣಬದ್ಧರಾಗಿ ಸಂಗಡ. *ಶ್ರೀಮತಿ.ಅನಿತಕೃಷ್ಣ* ಶಿಕ್ಷಕಿ, ತೀರ್ಥಹಳ್ಳಿ.

ಸಿರಿಗನ್ನಡಂ ಗೆಲ್ಗೆ..ಸಿರಿಗನ್ನಡಂ ಬಾಳ್ಗೆ.