ಶಿವಮೊಗ್ಗ ನ್ಯೂಸ್…
ಸಂಗೀತದಿಂದ ಖಿನ್ನತೆ ದೂರ ಆಗುವ ಜತೆಯಲ್ಲಿ ಮನಸ್ಸು ಸದಾ ಉತ್ಸಾಹದಿಂದ ಇರುವಂತೆ ಮಾಡತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಹೇಳಿದರು.
ನಗರದ ಮಥುರಾ ಪಾರಾಡೈಸ್‌ನಲ್ಲಿ “ಭಾವಗಾನ” ಸಂಸ್ಥೆಯ ಐದನೇ ವಾರ್ಷಿಕೋತ್ಸವ ಹಾಗೂ ಭಾವಗೀತೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಪಾಶ್ಚಮಾತ್ಯ ಸಂಗೀತದ ಅಬ್ಬರದಿಂದ ಮೂಲ ಸಂಗೀತಕ್ಕೆ ಧಕ್ಕೆಯಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಗೀತದ ಅಭ್ಯಾಸ ಮಾಡಿಸಬೇಕು.
ಸಂಗೀತ ಜ್ಞಾನದ ಜತೆಯಲ್ಲಿ ಉತ್ತಮ ಗಾಯಕರಾಗಿ ಮಕ್ಕಳು ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ಸಂಗೀತದ ಕಲಿಕೆಯಿಂದ ಉತ್ತಮ ಸಂಸ್ಕಾರಯುತ ಮೌಲ್ಯಗಳನ್ನು ಕಲಿಯಲು ಸಾಧ್ಯವಿದೆ. ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಮಕ್ಕಳಿಗೆ ಸಂಗೀತದ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ, ಭಾವಗಾನ ಸಂಸ್ಥೆಯ ವಾಸುರವರ ಸಂಗೀತ ಸೇವೆ ಅಪಾರ. ಸಾಹಿತ್ಯ ಪರಿಷತ್‌ಗೆ ಅವರ ನಿಸ್ವಾರ್ಥ ಸೇವೆ ಅವೀಸ್ಮರಣೀಯ. ಅವರ ಸುಗಮ ಸಂಗೀತ ಗರಡಿಯಲ್ಲಿ ನೂರಾರು ಜನ ಸಂಗೀತ ವಿದ್ಯಾರ್ಥಿಗಳು ಒಳ್ಳೆಯ ಗಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಕುಟುಂಬ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಭದ್ರಾವತಿ ವಾಸು ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಮುಖ್ಯ ಕಾರಣ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಸಂಗೀತ ಕ್ಷೇತ್ರಕ್ಕೆ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.
ನಟಸಾರ್ವಭೌಮ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಂಗೀತ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಗಾಯಕ, ನಿರೂಪಕ ಜಿ.ವಿಜಯ್‌ಕುಮಾರ್, ಭುಜಂಗಪ್ಪ, ವಿಜಯಾ ಸತೀಶ್, ಭಾಗ್ಯ, ನಾಗರಾಜ್, ಗಂಗಾಧರ್, ಆದ್ಯ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.