ರೆಮೋಗ್ಲಿಫ್ಲೋಜಿನ್+ವಿಲ್ಡಾಗ್ಲಿಪ್ಟಿನ್+ಮೆಟ್ಫಾರ್ಮಿನ್ ಅಂಶವಿರುವ ಸೋವಿ ದರದ ಒಂದೇ ಮಾತ್ರೆ ಜಗತ್ತಿನಲ್ಲೇ ಮೊದಲು ಭಾರತದಲ್ಲಿ ಬಿಡುಗಡೆ ಮಾಡಿದ ಕಂಪನಿ
ಜಗತ್ತಿನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾಗಿರುವ ಗ್ಲೆನ್ಮಾರ್ಕ್ ಫಾರ್ಮಾಸುಟಿಕಲ್ಸ್ ಲಿ. (ಗ್ಲೆನ್ಮಾರ್ಕ್) ಜಗತ್ತಿನಲ್ಲೇ ಮೊದಲ ಬಾರಿಗೆ ಟೈಪ್-2 ಡಯಾಬಿಟೀಸ್ಗೆ ರೆಮೋಗ್ಲಿಫ್ಲೋಜಿನ್, ವಿಲ್ಡಾಗ್ಲಿಪ್ಟಿನ್, ಮೆಟ್ಫಾರ್ಮಿನ್ ಈ ಮೂರೂ ಅಂಶವಿರುವ ಒಂದೇ ಮಾತ್ರೆಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲೇ ಮೊದಲಿಗೆ ಈ ಮಾತ್ರೆ ಮಾರುಕಟ್ಟೆಗೆ ಬಂದಿರುವುದು ವಿಶೇಷ. 18 ವರ್ಷ ಮೇಲ್ಪಟ್ಟ ಟೈಪ್-2 ಮಧುಮೇಹಿಗಳಿಗೆ ಸೋವಿ ದರದಲ್ಲಿ ಈ ಮಾತ್ರೆ ಲಭ್ಯವಾಗಲಿದೆ.
ಜಗತ್ತಿನಾದ್ಯಂತ ಟೈಪ್-2 ಮಧುಮೇಹಕ್ಕೆ ರೆಮೋಗ್ಲಿಫ್ಲೋಜಿನ್, ವಿಲ್ಡಾಗ್ಲಿಪ್ಟಿನ್, ಮೆಟ್ಫಾರ್ಮಿನ್ ಕಾಂಬಿನೇಶನ್ ಇರುವ ಔಷಧ ಬಳಸಲಾಗುತ್ತದೆ. ಆದರೆ, ಮಧುಮೇಹಿಗಳು ಇವುಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬೇಕಿತ್ತು. ಜೊತೆಗೆ ಇವು ದುಬಾರಿ ಕೂಡ ಆಗಿದ್ದವು. ಈ ಹಿನ್ನೆಲೆಯಲ್ಲಿ ಗ್ಲೆನ್ಮಾರ್ಕ್ ಕಂಪನಿ ಈ ಮೂರೂ ಅಂಶವಿರುವ ಒಂದೇ ಮಾತ್ರೆಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ರೆಮೋ ಎಂವಿ ಮತ್ತು ರೆಮೋಜೆನ್ ಎಂವಿ ಹೆಸರಿನಲ್ಲಿ ಇವು ಮಾರಾಟವಾಗಲಿವೆ. ಇವುಗಳಿಗೆ ಈಗಾಗಲೇ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ದ ಅನುಮತಿ ದೊರೆತಿದೆ.
ಗ್ಲೆನ್ಮಾರ್ಕ್ ಬಿಡುಗಡೆ ಮಾಡಿರುವ ನೂತನ ಮಾತ್ರೆಯಲ್ಲಿ ರೆಮೋಗ್ಲಿಫ್ಲೋಜಿನ್ 100 ಎಂಜಿ, ವಿಲ್ಡಾಗ್ಲಿಪ್ಟಿನ್ 50 ಎಂಜಿ ಹಾಗೂ ಮೆಟ್ಫಾರ್ಮಿನ್ 500/1000 ಎಂಜಿ ಇರುತ್ತದೆ. ಈ ಮಾತ್ರೆಯನ್ನು ಮಧುಮೇಹಿಗಳು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ಈ ಅಂಶಗಳಿರುವ ಇತರ ಕಂಪನಿಗಳ ಮಾತ್ರೆಗಳ ಬೆಲೆ ಒಬ್ಬ ರೋಗಿಗೆ ದಿನಕ್ಕೆ ಸುಮಾರು 75 ರೂ. ಆಗುತ್ತದೆ. ಆದರೆ, ಗ್ಲೆನ್ಮಾರ್ಕ್ನ ರೆಮೋ ಎಂವಿ ಹಾಗೂ ರೆಮೋಜೆನ್ ಎಂವಿ ಒಂದು ಮಾತ್ರೆಯ ಬೆಲೆ 16.5 ರೂ. ಆಗಿದ್ದು, ಒಬ್ಬ ರೋಗಿಗೆ ದಿನಕ್ಕೆ ಎರಡು ಮಾತ್ರೆಯಂತೆ 33 ರೂ. ತಗಲಲಿದೆ.
“ಅತ್ಯಂತ ಕಡಿಮೆ ದರದಲ್ಲಿ ಹೊಸ ಡಯಾಬಿಟೀಸ್ ಮಾತ್ರೆ ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಜಾಸ್ತಿಯಿದ್ದು, ಅವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ” ಎಂದು ಗ್ಲೆನ್ಮಾರ್ಕ್ನ ಭಾರತ ವಿಭಾಗದ ಗ್ರೂಪ್ ವೈಸ್ ಪ್ರೆಸಿಡೆಂಟ್ ಮತ್ತು ಬ್ಯುಸಿನೆಸ್ ಹೆಡ್ ಶ್ರೀ ಅಲೋಕ್ ಮಲಿಕ್ ಹೇಳಿದ್ದಾರೆ.