ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ವಿನೋಬನಗರದ ಮುಖ್ಯ ರಸ್ತೆಯಲ್ಲಿರುವ ಶಿವಾಲಯ ಪಕ್ಕದಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ ಮಳಿಗೆಗಳನ್ನು ಬೀದಿ ಬದಿಯ ವ್ಯಾಪಾರಸ್ಥರಿಗೆ ಹಂಚಿಕೆ ಮಾಡದೇ ಪಾಲಿಕೆ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಕ್ರಿಯಾ ಸಮಿತಿ ಕಾರ್ಯಕರ್ತರು ಇಂದು ಲಕ್ಷ್ಮಿ ಚಿತ್ರಮಂದಿರ ಬಳಿ ದಿಢೀರ್ ರಸ್ತೆ ತಡೆ ಹಾಗೂ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು.

ಮಳಿಗೆಗಳನ್ನು ಲಕ್ಷ್ಮಿ ಚಿತ್ರಮಂದಿರ ಬಳಿಯ ಫುಟ್ ಪಾತ್ ವ್ಯಾಪಾರಸ್ಥರಿಗೆ ಹಂಚಿಕೆ ಮಾಡುವುದಾಗಿ ಪಾಲಿಕೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಭರವಸೆ ನೀಡಿತ್ತು. ಆ ಪ್ರದೇಶದಲ್ಲಿ ಸಂಚಾರ ನಿಯಂತ್ರಣಕ್ಕೆ ಬೀದಿ ಬದಿಯ ವ್ಯಾಪಾರಸ್ಥರಿಂದ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಕಳೆದ 15 ವರ್ಷಗಳಿಂದ ಆ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಗುರುತಿಸಿ ಪಟ್ಟಿ ಮಾಡಿ ಅಧಿಕೃತವಾಗಿ ವಿತರಣೆಯನ್ನು ಕೂಡ ಮಾಡಲಾಗಿತ್ತು.

ಆದರೆ, ಮಳಿಗೆ ಹಂಚಿಕೆಯಲ್ಲಿ ಲೋಪವಾದ ಹಿನ್ನಲೆಯಲ್ಲಿ ತಡೆ ಹಿಡಿಯಲಾಗಿತ್ತು. ಈಗ ಮತ್ತೆ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡುತ್ತಿದ್ದು, ಅವರ ಬದುಕು ಮೂರಾಬಟ್ಟೆಯಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬರಬೇಕು. ಮಳಿಗೆಗಳನ್ನು ಅರ್ಹರಿಗೆ ವಿತರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ವ್ಯಾಪಾರಿಗಳಿಗೆ ಮಳಿಗೆ ನೀಡುವುದಾಗಿ ಮಾತು ಕೊಟ್ಟಿದ್ದರೂ, ಮಾತು ನೆರವೇರಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದಿಢೀರ್ ರಸ್ತೆ ತಡೆಯಿಂದ ಟ್ರಾಫಿಕ್ ಜಾಮ್ ಉಂಟಾಯಿತು.ರಸ್ತೆ ತಡೆ ಮಾಡದಂತೆ ಪೊಲೀಸರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರೂ ಸಹ ಅದನ್ನು ಲೆಕ್ಕಿಸದೇ ರಸ್ತೆ ತಡೆ ನಡೆಸಿದ್ದರಿಂದ 15 ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಿಪಿಐ ರವಿಕುಮಾರ್ ಅವರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿದ್ದರಿಂದ ರಸ್ತೆತಡೆ ಸ್ಥಗಿತಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ವಿ. ಭಗವಾನ್, ಶಮಿ, ಮದನ್, ಚಂದ್ರು, ಮಂಜುನಾಥ್, ಯಶೋಧಾ, ಚಂದ್ರಮ್ಮ, ಲತಾ, ರತ್ನಮ್ಮ ಮೊದಲಾದವರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…