ಶಿವಮೊಗ್ಗ ನ್ಯೂಸ್…
ಪ್ರತಿಷ್ಠಿತ ಪ್ಲಾಂಟ್ ಜೀನೋಮ್ ಸೇವಿಯರ್ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಅಮೃತ್ ನೋನಿ ಖ್ಯಾತಿಯ ವ್ಯಾಲ್ಯೂ ಪ್ರಾಡಕ್ಕೆ ಪ್ರವೇಟ್ ಲಿಮಿಟೆಡ್ಗೆ ನೀಡಿದೆ ಎಂದು ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಶ್ರೀನಿವಾಸ್ ಮೂರ್ತಿ ತಿಳಿಸಿದರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶಿಷ್ಟ ಗಿಡಗಳನ್ನು ಬೆಳೆಸಿದ ಹಾಗೂ ಸಂರಕ್ಷಿಸಿದ ದೇಶದ ಕೇವಲ 25 ಜನರಿಗೆ ಪ್ಲಾಂಟ್ ಜೀನೋಮ್ ಸೇವಿಯರ್ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಈ ವರ್ಷ ನೀಡಿದ್ದು ನ.11ರಂದು ನವದೆಹಲಿಯ ಎ.ಪಿ ಶಿಂದೆ ಸಿಂಪೋಸಿಯಂ ಹಾಲ್ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ನನಗೆ ಪ್ರಶಸ್ತಿ ಪ್ರದಾನ ಮಾಡಿ 1 ಲಕ್ಷ ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು ಎಂದರು.
ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆಯು ಅಮೃತ್ ನೋನಿ ಉತ್ಪನ್ನಗಳ ಮೂಲಕ ಇಂದು ದೇಶದಾದ್ಯಂತ ಲಕ್ಷಾಂತರ ಜನರ ಆರೋಗ್ಯ ಸುಧಾರಣೆಗೆ ಕಾರಣವಾಗಿದ್ದು, ನೋನಿ ಅಂಡ್ ಹರ್ಬ್ ಫಾರ್ಮರ್ ಅಸೋಸಿಯೇಷನ್ ಮೂಲಕ ನೋನಿ ಹಣ್ಣನ್ನು ತಾವು ಬೆಳೆದು ಬೇರೆ ಬೇರೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆಸಿ ಅವರ ಬದುಕಿಗೂ ಆಸರೆಯಾಗಿದೆ ಎಂದರು.164 ಕ್ಕೂ ಹೆಚ್ಚು ಪೋಷಕಾಂಶವಿರುವ ಏಕೈಕ ವಿಶಿಷ್ಟವಾದ ನೋನಿ ಹಣ್ಣನ್ನು ಜನರಿಗೆ ಪರಿಚಯಿಸಿ, ನಮ್ಮ ದೇಶದಲ್ಲಿ ಪ್ರಪ್ರಥಮ ಬಾರಿಗೆ ಜನಪ್ರಿಯಗೊಳಿಸಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ, ನೂರಾರು ಎಕರೆ ನೋನಿ ತೋಟವನ್ನು ಬೆಳೆಸಿದ ಕೀರ್ತಿ ಅಮೃತ್ ನೋನಿ ಗೆ ಸಲ್ಲುತ್ತದೆ ಎಂದರು.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಂಜುನಾಥ್ ನಾಯಕ್ ಮಾತನಾಡಿ, ಔಷಧಿ ಗುಣವುಳ್ಳ ಸಸ್ಯಗಳನ್ನು ಸಂರಕ್ಷಿಸಿ ಬೆಳೆಸಿದವರಿಗೆ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ವಿಶ್ವವಿದ್ಯಾನಿಲಯದಿಂದ ಔಷಧಿ ಸಸ್ಯಗಳ ಸಂಶೋಧನೆ ಹಾಗೂ ತಂತ್ರಜ್ಞಾನಕ್ಕೆ ಮಾರ್ಗದರ್ಶನ ನೀಡುತ್ತಿದ್ದು, ಔಷಧಿ ಗುಣವುಳ್ಳ ಹಣ್ಣುಗಳು ಯಾವುದೇ ಉಪಯೋಗಕ್ಕೆ ಬರುತ್ತದೆ ಎಂಬುದರ ಬಗ್ಗೆ ವಿವಿ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಅದೇ ರೀತಿ ಡಾ. ಶ್ರೀನಿವಾಸ್ ಮೂರ್ತಿ ಅವರು ಬೆಳೆದ ನೋನಿ ಹಣ್ಣುಗಳ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರಿಂದ ಇಂದು ದೇಶದಲ್ಲಿ ಅಮೃತ್ ನೋನಿ ಉತ್ಪನ್ನಗಳು ಹೆಚ್ಚು ಜನಪ್ರಿಯಗೊಂಡಿವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಅಂಬುಜಾಕ್ಷಿ ಡಾ.ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು.