ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಪ್ರೊಫೆಸರ್ ಬಿ. ಕೃಷ್ಣಪ್ಪ ಹೆಸರಿನಲ್ಲಿದ್ದ ರಾಜ್ಯದ ನಾಲ್ಕು ದಲಿತ ಸಂಘರ್ಷ ಸಮಿತಿಗಳು ಈಗ ವಿಲೀನವಾಗಿದ್ದು, ಎಲ್ಲರೂ ಒಟ್ಟಾಗಿದ್ದು ಸಂಘಟನೆಯನ್ನು ರಾಜ್ಯಾದ್ಯಂತ ಮತ್ತಷ್ಟು ವಿಸ್ತಾರಗೊಳಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ ಬಣ) ಮುಖಂಡರು ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒಕ್ಕೊರಲಿನಿಂದ ಘೋಷಿಸಿದರು.

ಶಿವಮೊಗ್ಗದ ಎಂ. ಗುರುಮೂರ್ತಿ, ರಾಯಚೂರಿನ ಹನುಮಂತಪ್ಪ, ಚಿಕ್ಕಬಳ್ಳಾಪುರದ ಗಂಗಾಧರ್, ಹಾಸನದ ಸೋಮಶೇಖರ್, ಮಂಡ್ಯದ ಅಂದಾನಿ ಮೊದಲಾದ ಪ್ರಮುಖರು ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಬಿ. ಕೃಷ್ಣಪ್ಪ ಅವರ ಹೆಸರಿನಿಂದಲೇ ಪ್ರಚಲಿತದಲ್ಲಿತ್ತು. ಆದರೆ, ಹಲವು ಕಾರಣಗಳಿಂದ ಸಂಘಟನೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯ ತಳೆದು ಬೇರೆ ಬೇರೆಯಾಗಿದ್ದವು. ಈಗ ನ್ಯಾಯಾಲಯ ಕೂಡ ಪ್ರೊ. ಕೃಷ್ಣಪ್ಪ ಬಣಕ್ಕೆ ಆದ್ಯತೆ ನೀಡಿದೆ. ಹಾಗಾಗಿ ಆ ಹೆಸರಿನ ಪ್ರಮುಖ ನಾಲ್ಕು ಸಂಘಟನೆಗಳನ್ನೂ ವಿಲೀನಗೊಳಿಸಲಾಗಿದೆ ಎಂದರು.

ಹೀಗೆ ವಿಲೀನಗೊಂಡ ಸಂಘಟನೆಗಳು 2022ರ ಫೆಬ್ರವರಿ 11 ಮತ್ತು 12ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ಐಕ್ಯತಾ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಆ ಮೂಲಕ ದಲಿತ ಆಶಯಗಳನ್ನು ಈಡೇರಿಸುವುದು, ಸರ್ಕಾರದ ಸವಲತ್ತುಗಳನ್ನು ಎಲ್ಲರಿಗೂ ತಲುಪುವಂತೆ ಮಾಡುವುದು, ಸಂಘಟನೆಯನ್ನು ಬೆಳೆಸುವುದು, ಸಾಂಸ್ಕೃತಿಕವಾಗಿ ದಲಿತರನ್ನು ಒಗ್ಗೂಡಿಸುವುದು ಮತ್ತು ದಲಿತರ ದನಿಗಳನ್ನೇ ಅಡಗಿಸುವವರ ವಿರುದ್ಧ ಸಿಡಿದೇಳುವುದು, ಮನುವಾದಿಗಳ ಬೆದರಿಯನ್ನು ಕಟ್ಟಿಹಾಕುವ ಕೆಲಸವನ್ನು ಮಾಡಲಾಗುತ್ತದೆ.

ನಾಲ್ಕೂ ಸಂಘಟನೆಗಳು ಒಂದಾಗಿರುವುದರಿಂದ ದಲಿತ ಸಂಘಟನೆಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು.ಹಂಸಲೇಖ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ:ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸರಿಯಾದ ಮಾತುಗಳನ್ನೇ ಆಡಿದ್ದಾರೆ. ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವುದಕ್ಕಿಂತ ದಲಿತರನ್ನೇ ತಮ್ಮ ಮನೆಗೆ ಕರೆಯಿಸಿ ಊಟ ಹಾಕಿಸಲಿ ಎಂಬ ಹೇಳಿಕೆ ಅತ್ಯಂತ ಸಮಂಜಸವಾಗಿದೆ ಮತ್ತು ಅರ್ಥಪೂರ್ಣವಾಗಿದೆ. ಹಾಗೆಯೇ ಭಗವದ್ಗೀತೆಗಿಂತ ಸಂವಿಧಾನಕ್ಕೆ ನಾವು ಹೆಚ್ಚು ಗೌರವ ಕೊಡಬೇಕು ಎಂಬ ಅವರ ಮಾತು ಕೂಡ ಸತ್ಯವಾಗಿದೆ. ಭಗವದ್ಗೀತೆ ಸಂವಿಧಾನ ಆಗಲಾರದು. ಧರ್ಮಕ್ಕಿಂತ ಸಂವಿಧಾನ ದೊಡ್ಡದು ಎಂಬ ಅರ್ಥದಲ್ಲಿ ಅವರು ಮಾತನಾಡಿರುವುದು ಅತ್ಯಂತ ಸಹಜವಾಗಿದೆ ಮತ್ತು ಸರಿಯಾಗಿದೆ. ಹಂಸಲೇಖ ಅವರು ದೃತಿಗೆಡುವ ಅವಶ್ಯಕತೆ ಇಲ್ಲ. ಇಡೀ ದಲಿತ ಸಮೂಹ ಅವರ ಪರವಾಗಿ ಇದ್ದೇವೆ ಎಂದು ಎಂ. ಗುರುಮೂರ್ತಿ ಹೇಳಿದರು.

ಆದರೆ, ಕೆಲವರು ಈ ಮಾತನ್ನ ಅರಗಿಸಿಕೊಳ್ಳಲಾಗದೆ ಅದೇನು ತಪ್ಪು ಮಾಡಿದ್ದಾರೋ ಎನ್ನುವಂತೆ ಕ್ಷಮೆ ಕೇಳಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದಾರೆ. ಇತಿಹಾಸದುದ್ದಕ್ಕೂ ದಲಿತರ ದನಿಗಳನ್ನು ಅಡಗಿಸುವ ಕೆಲಸ ಈ ದೇಶದಲ್ಲಿ ಶೇ.15ರಷ್ಟು ಮಾತ್ರ ಇರುವ ಮನುವಾದಿಗಳಿಂದ ನಡೆಯುತ್ತಲೇ ಇದೆ. ಆದರೆ, ಶೇ.85ರಷ್ಟು ಇರುವ ದಲಿತರು, ಹಿಂದುಳಿದವರು ಮನುವಾದಿಗಳಿಗೆ ಹೆದರಿಯೇ ಜೀವಿಸಬೇಕಾಗಿದೆ. ಬುದ್ಧ, ಬಸವಣ್ಣನವರಿಂದ ಹಿಡಿದು, ಕಲಬುರ್ಗಿ, ಗೌರಿಯ ಕಾಲದವರೆಗೂ ಇದು ನಡೆಯುತ್ತಲೇ ಬಂದಿದೆ. ದಲಿತಪರವಾದ ದನಿಗಳು ಅಡಗಿ ಹೋಗುತ್ತಲೇ ಇವೆ ಎಂದರು.ಪ್ರತಾಪಸಿಂಹ ಎಂಬ ಅವಿವೇಕಿಯೊಬ್ಬ ಪ್ರಿಯಾಂಕ ಖರ್ಗೆಯವರಿಗೆ ಮಾತನಾಡಿರುವ ರೀತಿ ಅತ್ಯಂತ ಅಸಹ್ಯಕರವಾಗಿದೆ. ಪ್ರಿಯಾಂಕ ಎಂದು ಹೆಸರಿಟ್ಟುಕೊಂಡಿರುವ ಖರ್ಗೆ ಗಂಡೋ ಹೆಣ್ಣೋ ಎಂದು ಪ್ರಶ್ನಿಸುವ ಮೂಲಕ ತನ್ನ ಪ್ರತಾಪವನ್ನ ಈತ ತೋರಿಸಿದ್ದಾನೆ.

ಇವನ ಹೆಸರು ಕೂಡ ಪ್ರತಾಪಸಿಂಹ ಎಂದಿದೆ. ಹಾಗಾದರೆ ಈತ ಮೃಗದ ಜಾತಿಗೆ ಸೇರಿದ್ದಾನೆ ಎಂದು ಅರ್ಥವಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಮೃಗಗಳ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದರು.ದಲಿತರ ಅಭಿವೃದ್ಧಿಗೆ ಸರ್ಕಾರ ಮೀಸಲಿಟ್ಟಿದ್ದ 30415 ಕೋಟಿ ಹಣದಲ್ಲಿ ಕೇಲವ 11861 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಆದ್ದರಿಂದ ಉಳಿದ ಹಣವನ್ನು ವಾಪಾಸ್ಸು ಕಳಿಸಿ ಎಂದು ಸಚಿವ ಗೋವಿಂದ ಕಾರಜೋಳ ಅವರ ಹೇಳಿಕೆಯನ್ನು ಖಂಡಿಸಿದ ಅವರು, ದಲಿತರಿಗಾಗಿ ಮೀಸಲಿಟ್ಟಿರುವ ಹಣವನ್ನು ಬೇರೆ ಯಾವ ಇಲಾಖೆಗಳೂ ಬಳಸಿಕೊಳ್ಳಬಾರದು ಎಂಬ ಆದೇಶವನ್ನು ಇವರು ಧಿಕ್ಕರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕರಿಯಪ್ಪ, ಶಿವಪ್ಪ, ಏಸು ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…