ಶಿವಮೊಗ್ಗ ನ್ಯೂಸ್…
ಶಿವಮೊಗ್ಗ ಮತದಾರರ ಪಟ್ಟಿ ಪರಿಷ್ಕರಣೆ ಆಗದೇ ಚುನಾವಣಾ ದಿನಾಂಕವನ್ನು ಘೋಷಿಸುವುದು ಸರಿಯಲ್ಲ ಎಂದು ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಚುನಾವಣೆ ದಿನಾಂಕವನ್ನು ಘೋಷಿಸಲಾಗಿದೆ. ನವೆಂಬರ್ 16ರಿಂದ 23ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಮತದಾರರ ಪಟ್ಟಿಯೇ ದೋಷಪೂರಿತವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಹಂತದಲ್ಲಿದೆ. ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಲಿಚ್ಛಿಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಭಾಗಸಂಖ್ಯೆ, ಕ್ರಮ ಸಂಖ್ಯೆ, ಸೂಚಕರ ಭಾಗಸಂಖ್ಯೆ ಕ್ರಮ ಸಂಖ್ಯೆ ಬೇಕಾಗುತ್ತದೆ.
ಪಟ್ಟಿ ಪರಿಷ್ಕರಣೆ ಇಲ್ಲದೇ ಈ ಮಾಹಿತಿಳನ್ನು ನೀಡುವುದಾದರೂ ಹೇಗೆ ಇದೊಂದು ಗೊಂದಲಮಯವಾಗಿದೆ ಎಂದು ತಿಳಿಸಿದರು.ಮೊದಲು ಮತದಾರರ ಪಟ್ಟಿ ಪರಿಷ್ಕರಣೆ ಆಗಬೇಕು. ಅಲ್ಲಿಯವರೆಗೂ ಚುನಾವಣಾ ಆಯೋಈಗ ಚುನಾವಣೆಯ ದಿನಾಂಕ ಘೋಷಿಸಬಾರದಿತ್ತು. ಪೂರ್ವಭಾವಿ ತಯಾರಿ ಮಾಡಿಕೊಳ್ಳದೇ ಇರುವುದು ವಿಷಾದದ ಸಂಗತಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಪೂರ್ವಭಾವಿ ತಯಾರಿ ಮಾಡಿಕೊಳ್ಳುವವರೆಗೂ ಚುನಾವಣೆಯನ್ನು ಕೆಲವು ದಿನಗಳ ಕಾಲ ಮುಂದೂಡಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.