ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ನಗರದ 25 ನೇ ವಾರ್ಡ್ ನಲ್ಲಿ ಪೌರ ಕಾರ್ಮಿಕನ ಮೇಲೆ ಸ್ಥಳೀಯ ಕಿಡಿಗೇಡಿಗಳು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದು, ಪೌರ ಕಾರ್ಮಿಕ ದೇವರಾಜ್ ಗಂಭೀರ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಮತ್ತು ಪಾಲಿಕೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿ ಮಾಹಿತಿ ಪಡೆದರು. ಪಾಲಿಕೆ ಈಗಾಗಲೇ ಹಸಿ ಕಸ ಮತ್ತು ಒಣ ಕಸಕ್ಕೆ ಹಸಿರು ಮತ್ತು ನೀಲಿ ಬಕೆಟ್ ಗಳನ್ನು ಕೊಟ್ಟಿದ್ದು, ಕಸ ಬೇರ್ಪಡಿಸಿ ಕೊಡುವಂತೆ ಸೂಚನೆ ನೀಡಿದೆ. ಆದರೆ, ಜೆಪಿ ನಗರದ ಮನೆಯೊಂದರಲ್ಲಿ ಕಸ ವಿಂಗಡಣೆ ಮಾಡದೇ ಪ್ಲಾಸ್ಟಿಕ್ ಕವರ್ ನಲ್ಲಿ ಕಸ ತುಂಬಿಸಿಕೊಡಲಾಗಿತ್ತು.

ಆಗ ಪಾಲಿಕೆ ಹೊರಗುತ್ತಿಗೆ ನೌಕರ ದೇವರಾಜ್ ಬಕೆಟ್ ನಲ್ಲಿ ಕಸ ಬೇರ್ಪಡಿಸಿ ಕೊಡಿ ಇವತ್ತು ಎರಡು, ನಾಳೆ ಎರಡು ಚೀಲ ಕೊಡಿ ಎಂದು ಮನವಿ ಮಾಡಿದ್ದಾರೆ. ನಾಳೆಯಿಂದ ಕಸ ಕೊಡುವಾಗ ಬಕೆಟ್ ನಲ್ಲಿಯೇ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಕೊಡಿ ಎಂದು ಹೇಳಿದ್ದಾನೆ. ಇಷ್ಟಕ್ಕೆ ಕಸ ನೀಡಿದ ಮನೆಯ ಹುಡುಗ ಏಕಾಏಕಿ ಅವಾಚ್ಯ ಶಬ್ಧಗಳಿಂದ ಬೈಯ್ದು ಕಸ ಸಾಗಿಸುವ ವಾಹನದ ಗಾಜನ್ನು ಕೈಯಿಂದ ಒಡೆದು ಪುಡಿ ಮಾಡಿದ್ದಾನೆ. ಚಾಲಕ ಮಂಜಾನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟಕ್ಕೂ ಸುಮ್ಮನಾಗದೇ ಸುತ್ತಮುತ್ತಲಿನ 15 ಜನರ ಗುಂಪು ಕಸ ಲೋಡ್ ಮಾಡುವ ದೇವರಾಜ್ ಮೇಲೆ ತೀವ್ರ ಸ್ವರೂಪದ ಹಲ್ಲೆ ಮಾಡಿದೆ. ಹಲ್ಲೆಗೊಳಗಾದ ಕಾರ್ಮಿಕರು ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹೆಲ್ತ್ ಇನ್ಸ್ ಪೆಕ್ಟರ್ ನಿಶಾ, ಆರೋಗ್ಯಾಧಿಕಾರಿ ಮದಕರಿ ನಾಯ್ಕ್, ಭೇಟಿ ನೀಡಿ ರಕ್ತಸ್ರಾವವಾಗುತ್ತಿದ್ದ ಕಾರ್ಮಿಕ ದೇವರಾಜ್ ಮತ್ತು ಮಂಜಾನಾಯ್ಕ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತುಂಗಾನಗರ ಠಾಣೆಯಲ್ಲಿ ಈ ಸಂಬಂಧ 7 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಇಂದು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಸಾಂತ್ವನ ಹೇಳಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದು, ಪೌರ ಕಾರ್ಮಿಕರಿಗೆ ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ಕಾಂಗ್ರೆಸ್ ಮುಖಂಡರಾದ ರಂಗೇಗೌಡ, ರಂಗನಾಥ್ ಮೊದಲಾದವರಿದ್ದರು.(ಫೋಟೋ ಇದೆ)

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…