ಶಿವಮೊಗ್ಗ ನ್ಯೂಸ್…
ರಾಜ್ಯ ಸರ್ಕಾರ ಭತ್ತ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸಿ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಮಳೆ ಹಾನಿ ಪರಿಹಾರ ಈ ಕೂಡಲೇ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು ಶಿವಮೊಗ್ಗ ಜಿಲ್ಲೆಯಲ್ಲಿ ೭೮,೦೦೦ ಹೆಕ್ಟೇರ್‌ನಲ್ಲಿ ಭತ್ತ, ೫೩,೦೦೦ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಮತ್ತು ರಾಜ್ಯದಲ್ಲಿ ೧೦.೨೨ಲಕ್ಷ ಹೆಕ್ಟೇರ್‌ನಲ್ಲಿ ಭತ್ತ, ೧೪.೧೬ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಮತ್ತು ೬.೯೦ಹೆಕ್ಟೇರ್‌ನಲ್ಲಿ ರಾಗಿ ಬೆಳೆದಿದ್ದಾರೆ. ಈ ವರ್ಷ ಮಳೆ ಚೆನ್ನಾಗಿ ಬಂದು ಒಳ್ಳೆಯ ಫಸಲು ಬಂದಿದೆ ಮತ್ತು ಮಳೆ ಹೆಚ್ಚಾಗಿ ಕೊಯ್ದು ಸಂದರ್ಭದಲ್ಲಿ ಬೆಳೆ ನಷ್ಟ ಸಹ ಆಗಿದೆ. ಉಳಿದ ಬೆಳೆಯನ್ನಾದರೂ ಸರ್ಕಾರ ನ್ಯಾಯಯುತ ಬೆಲೆ ಕೊಟ್ಟು ಖರೀದಿಸಿದರೆ ರೈತ ಬದುಕುತ್ತಾನೆ ಎಂದರು.ಇತ್ತೀಚಿನ ದಿನಗಳಲ್ಲಿ ಎಲ್ಲಾ ಬೆಲೆಗಳೂ ಗಗನಕ್ಕೇರಿವೆ. ದುಬಾರಿ ಕೂಲಿ, ರಸಗೊಬ್ಬರ, ಕೀಟನಾಶಕಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ರೈತರ ಜೀವನ ವೆಚ್ಚವೂ ಸಹ ಜಾಸ್ತಿಯಾಗಿದೆ.
ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಇಲ್ಲ. ರೈತರು ಬೆಳೆಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆ ಕಾರಣ ಸಾಲ ತೀರಿಸಲಾಗುತ್ತಿಲ್ಲ, ಸಾಲದ ಹೊರೆ ಜಾಸ್ತಿಯಾಗಿ ಜೀವನ ನಿರ್ವಹಣೆ ದುಸ್ಥರವಾಗಿದೆ. ರೈತರು ಬ್ಯಾಂಕ್ ಸಾಲ, ಸಹಕಾರಿ ಸಾಲ, ಖಾಸಗಿ ಸಾಲ ಹೀಗೆ ಸಾಲಗಳನ್ನು ತೀರಿಸಲು ಸಾಧ್ಯವಾಗದೆ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಕಳೆದ ವರ್ಷ ಸುಗ್ಗಿ ಕಾಲದ ನಂತರ ಭತ್ತ ಕ್ವಿಂಟಾಲ್ ಒಂದಕ್ಕೆ ೨,೫೦೦ರೂ ಇದ್ದು ಈಗ ೧,೩೦೦ರೂ ಗೆ, ಮೆಕ್ಕೆಜೋಳ ಹಿಂದೆ ೧,೬೦೦ರೂ ಇದ್ದು ಈಗ ಕ್ವಿಂಟಾಲ್ ಒಂದಕ್ಕೆ ೧,೦೦೦ರೂವರೆಗೆ ಕುಸಿದಿದೆ. ವರ್ತಕರು ಬೆಲೆ ಕುಸಿತದ ದುರ್ಲಾಭ ಪಡೆದು ಅಗ್ಗದ ದರದಲ್ಲಿ ಕೊಂಡು ನಂತರ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಇದ್ದರಿಂದ ಬೆಳೆ ಬೆಳೆಯುವ ರೈತ, ಕೊಂಡು ತಿನ್ನುವ ಗ್ರಾಹಕ ಎರಡೂ ವರ್ಗಕ್ಕೂ ಲಾಭವಿಲ್ಲ ಎಂದರು.ರಾಜ್ಯ ಸರ್ಕಾರ ಕೊಪ್ಪಳ, ದಕ್ಷಿಣ ಕನ್ನಡ, ಉಡುಪಿ ಈ ೩ ಜಿಲ್ಲೆಗಳಲ್ಲಿ ಮಾತ್ರ ಭತ್ತ ಖರೀದಿಗೆ ರೈತರು ನೊಂದಣಿ ಮಾಡಲು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮಕ್ಕೆ ಆದೇಶಿಸಿದೆ. ಶಿವಮೊಗ್ಗ ಸೇರಿದಂತೆ ಉಳಿದ ಜಿಲ್ಲೆಗಳ ಭತ್ತ ಬೆಳೆಗಾರರ ಬಗ್ಗೆ ಸರ್ಕಾರ ನಿರ್ಧರಿಸಿಲ್ಲ ಮತ್ತು ಮೆಕ್ಕೆಜೋಳ ಖರೀದಿಯ ಬಗ್ಗೆಯೂ ಸಹ ಯಾವುದೇ ನಿರ್ಧರ ಮಾಡಿಲ್ಲ. ಸರ್ಕಾರ ಈ ಕೂಡಲೇ ಭತ್ತ ಮತ್ತು ಮೆಕ್ಕೆಜೋಳಕ್ಕೆ ಕ್ವಿಂಟಾಲ್ ಒಂದಕ್ಕೆ ೩೦೦೦ರೂ, ರಾಗಿ ಕ್ರಿಂಟಾಲ್ ಒಂದಕ್ಕೆ ೪೦೦೦ರೂ. ಬೆಲೆ ನಿಗಧಿ ಮಾಡಿ ತಕ್ಷಣವೇ ಖರೀದಿ ಕೇಂದ್ರ ಪ್ರಾರಂಭಿಸಿ ಖರೀದಿಸಬೇಕು ಎಂದು ಆಗ್ರಹಿಸಿದರು.
ಮಳೆ ಹಾನಿ ಪರಿಹಾರ ಈ ವರ್ಷ ಹಿಂದಿನ ವರ್ಷಗಳಿಗಿಂತ ಮಳೆ ಜಾಸ್ತಿಯಾಗಿ ಜನ-ಜಾನುವಾರುಗಳು ಸಾವನ್ನಪ್ಪಿವೆ. ಕಟಾವಿಗೆ ಬಂದ ಬೆಳೆ ಮಣ್ಣು ಪಾಲಾಗುತ್ತಿದೆ. ಮತ್ತೊಂದಡೆ ಮೊಳಕೆ ಒಡೆಯಲು ಆರಂಭಿಸಿವೆ. ಈವರೆಗೂ ಬೆಳೆ ಸಮೀಕ್ಷೆ ಪೂರ್ಣಗೊಂಡಿಲ್ಲ. ತಕ್ಷಣ ಸಮೀಕ್ಷೆ ಮಾಡಿಸಬೇಕು. ಹೋದ ವರ್ಷ ಮನೆ ಕಳೆದುಕೊಂಡ ಜನರು ಅರ್ಧ ಮನೆ ಕಟ್ಟಿಸಿ ನಿಲ್ಲಿಸಿದ್ದಾರೆ. ಅವರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಅವರಿಗೆ ಮತ್ತು ಈ ಸಾರಿ ಅತೀವೃಷ್ಟಿಯಿಂದ ನಷ್ಟಕ್ಕೆ ಒಳಗಾದವರಿಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಸಗೊಬ್ಬರ ಖಾತೆ ಕೇಂದ್ರ ಸಚಿವರು ಮತ್ತು ರಾಜ್ಯ ಕೃಷಿ ಸಚಿವರು ರಾಜ್ಯದಲ್ಲಿ ರಸಗೊಬ್ಬರದ ಆಭಾವವಿಲ್ಲವೆಂದು ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಯಾವ ರಸಗೊಬ್ಬರಗಳು ಕೂಡ ಸಿಗುತ್ತಿಲ್ಲ. ಈಗ ಹಿಂಗಾರು ಬಿತ್ತನೆ ಪ್ರಾರಂಭವಾಗಿದೆ. ಈ ಬೆಳೆಗಳಿಗೆ ಮತ್ತು ತೋಟದ ಬೆಳೆಗಳಿಗೆ ರಸಗೊಬ್ಬರದ ಅವಶ್ಯಕತೆ ಇದೆ. ರಸಗೊಬ್ಬರ ಅಭಾವವಿರುವುದರಿಂದ ವರ್ತಕರು ಕಾಳಸಂತೆಯಲ್ಲಿ ಇನ್ನೂ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಈ ಪರಿಸ್ಥಿತಿಯ ದುರ್ಲಾಭ ಪಡೆದು ನಕಲಿ ರಸಗೊಬ್ಬರ ಸಹ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ತತಕ್ಷಣ ರಸಗೊಬ್ಬರ ಸರಬರಾಜು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.ಒಂದು ವೇಳೆ ಸರ್ಕಾರ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ, ಮಳೆ ಹಾನಿ ಪರಿಹಾರ, ರಸಗೊಬ್ಬರ ಪೂರೈಕೆ ಮಾಡದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾದಿತ್ತು ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಕೆ.ರಾಘವೇಂದ್ರ, ಹಿಟ್ಟೂರು ರಾಜು, ಇ.ಬಿ.ಜಗದೀಶ್, ಎಂ.ಡಿ.ನಾಗರಾಜ್, ಸಿ.ಚಂದ್ರಪ್ಪ, ಜ್ಞಾನೇಶ್ ಉಪಸ್ಥಿತರಿದ್ದರು.