ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ  ನಾನು ಸ್ಪರ್ಧಿಸಿದ್ದು, ಈಗಾಗಲೇ ಬಹುತೇಕ ಮತದಾರರನ್ನು ಮುಖತಃ ಭೇಟಿಮಾಡಿ ಮತಯಾಚಿಸಿದ್ದೇನೆ. ಈ ಚುನಾವಣೆಯಲ್ಲಿ ಜಾತಿ ಮತ್ತು ರಾಜಕಾರಣ ಮೀರಿ ಬಹುಮತದಿಂದ ಗೆಲ್ಲಲಿದ್ದೇನೆ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಸ್ಪರ್ಧಾಳು ಶಿ.ಜು.ಪಾಶ  ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಎಂದ ಕೂಡಲೇ ಮೂಗು ಮುರಿಯುವ ದೊಡ್ಡ ಸಂಖ್ಯೆಯ ಕನ್ನಡಿಗರಿದ್ದಾರೆ. ಅಂಥದ್ದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಸ್ಪರ್ಧಿಸಿ ಗೆದ್ದವರೆಲ್ಲ ಮೂಗು ಮುರಿಯುತ್ತಿರುವ ಹಾಗೂ ಕಸಾಪದಿಂದ ದೂರವೇ ಉಳಿದಿರುವ ಕನ್ನಡಿಗರನ್ನು ಮತ್ತು ಕನ್ನಡವನ್ನೇ ಬರೆಯುವ ಸಾಹಿತಿಗಳನ್ನು ಅಂಗಳಕ್ಕೆ ಕರೆತರುವ ಪ್ರಯತ್ನವನ್ನೇ ಮಾಡಲಿಲ್ಲ. ಬದಲಿಗೆ ತಮ್ಮ ಆಸ್ಥಾನದಲ್ಲಿದ್ದ ತಲೆಗಳಿಗೆ ಮಾತ್ರ ಬೆಲೆ ಕೊಟ್ಟುಕೊಂಡು ಮಾಸಿಹೋಗಿದ್ದಾರೆ. ಜನ ಕೂಡ ರೋಸಿ ಹೋಗುವಂತೆ ಕಸಾಪದ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ ಎಂದು ಆರೋಪಿಸಿದರು.ಕಸಾಪ ಎಲ್ಲರ ಪ್ರೀತಿಯ ಪರಿಷತ್ತು ಆಗಬೇಕು. ಇಲ್ಲಿ ಹೊಸ ಹೊಸ ರೀತಿಯಲ್ಲಿ ಕಾರ್ಯವಕ್ರಮಗಳ ಆಯೋಜನೆ ಅಗಬೇಕು. ಕನ್ನಡ ಮತ್ತು ಕನ್ನಡ ಸಾಹಿತ್ಯ ಮಾತ್ರ ಇಲ್ಲಿ ಮುಖ್ಯವಾಗಿ ಕಾಣಬೇಕು. ತನ್ನವರನ್ನು ರಾಜಮರ್ಯಾದೆಗೆ ಒಳಪಡಿಸಿ ತನ್ನವರಲ್ಲದವರನ್ನು ಬಹುದೂರಕ್ಕೇ ಇಟ್ಟುಬಿಡುವ ಕೆಟ್ಟ ಸಂಸ್ಕೃತಿ ಈಗಲಾದರೂ ನಾಶವಾಗಬೇಕು. ಯಾರು ಅಧ್ಯಕ್ಷರಾಗಿದ್ದರೋ ಅವರು ಅವರದೇ ಜಾತಿಯ ಜನರನ್ನು ಕರೆತಂದು ಸದಸ್ಯರಾಗಿ ಸಿಕೊಂಡರು. ಅರ್ಹತೆವುಳ್ಳ ಅಸಂಖ್ಯ ಕನ್ನಡಿಗರು ಮತ್ತು ಸಾಹಿತಿಗಳನ್ನು ಬಹಳ ನಿರ್ಲಕ್ಷ್ಯದಿಂದಲೇ ಕಂಡರು. ಜಿಲ್ಲಾ ಸಮ್ಮೇಳನ ಗಳಾಗಲೀ, ತಾಲ್ಲೂಕು ಸಮ್ಮೇಳನ ಗಳಾಗಲೀ, ಸಾಹಿತ್ಯ ಹುಣ್ಣಿಮೆಗಳಾಗಲೀ ಎಲ್ಲವೂ ರಾಜಕೀಯಮಯವಾಗಿದ್ದವು. ಈಗಲಾದರೂ ಈ ರಾಜಕಾರಣ ಮತ್ತು ರಾಜಕಾರಣಿಗಳಿಂದ ಕಸಾಪ ಮುಕ್ತವಾಗಿ ಕನ್ನಡಿಗರ ಮತ್ತು ಕನ್ನಡವನ್ನೇ ಬರೆಯುವ ಲೇಖಕರ ವೇದಿಕೆಯಾಗಬೇಕಿದೆ. ಆ ಕೆಲಸವನ್ನು ಇನ್ನುಮುಂದೆ ಮಾಡೋಣ ಎಂದು ಹೇಳಿದರು.

ಅಧ್ಯಕ್ಷರಾದ ಕೂಡಲೇ ಯಾರಿಗೆ ಆಗಲೀ ಕೋಡು ಮೂಡ ಬಾರದು. ಜಾತಿ ಸಂಘಟನೆಯಂತೆ ಕಸಾಪವನ್ನು ಕಟ್ಟದೇ ಮುಕ್ತವಾಗಿ ಸಾಹಿತ್ಯದ ವಾತಾವರಣ ನಿರ್ಮಿಸಬೇಕು. ಇದೇ ಕಸಾಪ ಹೊಸ ಹೊಸ ಸಾಹಿತ್ಯದ ಪಲ್ಲಟಗಳಲ್ಲಿ ಚರ್ಚೆಗೊಳಗಾಗಬೇಕು. ಅರ್ಹತೆಯುಳ್ಳ ವ್ಯಕ್ತಿಗೆ ಇಲ್ಲಿ ವೇದಿಕೆ ಸಿಗಬೇಕು. ಅರ್ಥಪೂರ್ಣ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕಾರ್ಯಕ್ರಮವೆಂದರೆ ಕಸಾಪ ವೇದಿಕೆಯತ್ತ ಜನ ಹರಿದುಬರುವಂತಿರಬೇಕು. ಅಂತಹ ಕೆಲಸವನ್ನು ನಿಮ್ಮೆಲ್ಲರ ಸಹಕಾರದಿಂದ, ನಿಮ್ಮನ್ನೂ ಒಳಗೊಂಡಂತೆ ಮಾಡಬೇಕೆಂಬ ಹುಮ್ಮಸ್ಸು ನನ್ನಲ್ಲಿದೆ. ಇಲ್ಲಿ ನೆಪಕ್ಕೆ ಮಾತ್ರ ನಾನು ಅಧ್ಯಕ್ಷ ಆಗಬಹುದು. ಪ್ರತಿಯೊಂದು ಕಾರ್ಯಕ್ರಮಗಳ ರೂವಾರಿಗಳು ಸದಸ್ಯರೇ ಆಗಿರುತ್ತಾರೆ ಎಂದು ವಿವರಿಸಿದರು. ಕಳೆದ ೩೦ ವರ್ಷಗಳಿಂದ ಶಿವಮೊಗ್ಗವೂ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಲೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದೇನೆ. ಅಪ್ಪನ ಬೀಡಿ ಕವನ ಸಂಕಲನ, ಕೋಳಿ ಹುಂಜದ ಹೂವು ಕವಿತಾ ಸಂಕಲನ (ಪ್ರಕಟಣೆ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು), ಕೆರೆಯಂಗಳದ ನವಾಬ ಕಥಾ ಸಂಕಲನ, ಮಹಾವಿನಾಶ, ಡಿಸ್ಕವರಿ, ಪತ್ರಿಕೋದ್ಯಮ ಮತ್ತು ಸಾಹಿತ್ಯ (ಪ್ರಕಟಣೆ: ಕರ್ನಾಟಕ ಮಾಧ್ಯಮ ಅಕಾಡೆಮಿ) ಕೃತಿಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ.ಶಿವಮೊಗ್ಗ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿ, ಸಂಕ್ರಮಣ ಕಾವ್ಯ ಮತ್ತು ಕಥಾ ಪುರಸ್ಕಾರ, ಬೆಂಗಳೂರು ಕರ್ನಾಟಕ ಸಂಘದ ನಾಗರಾಜರಾವ್ ದತ್ತಿನಿಧಿ ಬಹುಮಾನ, ಎರಡು ಬಾರಿ ಪ್ರೆಸ್‌ಗಿಲ್ಡ್ ಪ್ರಶಸ್ತಿ, ಕರ್ನಾಟಕ ಕಾರ್ಯೆನಿರತ ಪತ್ರಕರ್ತರ ಸಂಘದ ರಾಜ್ಯ ಪರಿಸರ ಪ್ರಶಸ್ತಿ, ರೋಟರಿ ಯುವ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಕಥಾ ಪುರಸ್ಕಾರ, ಮುಂಬೈ ಅಕ್ಷಯ ಸಾಹಿತ್ಯ ಪುರಸ್ಕಾರ, ಪ್ರಜಾವಾಣಿ ದೀಪಾವಳಿ ವಿಶೇಷಾಂಕ-೨೦೧೨ರ ಕಾವ್ಯ ಪ್ರಶಸ್ತಿ, ಮೈಸೂರು ದಸರಾ ಕವಿಗೋಷ್ಠಿ ವಿಶೇಷ ಸನ್ಮಾನ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದಿ ಯೇನಪೋಯ ಮೊಹಿದ್ದೀನ್ ಕುನ್ಹಿ ದತ್ತಿನಿಧಿ, ಶಿವಮೊಗ್ಗ ಜಿಲ್ಲಾ ಕಾರ್ಯಷನಿರತ ಪತ್ರಕರ್ತರ ಸಂಘದ ಶ್ರೀ ನಾಗಾನಂದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಾಹಿತ್ಯ ಮತ್ತು ಪತ್ರಿಕಾರಂಗದ ಸೇವೆಗೆ ಸಿಕ್ಕಿವೆ. ರಂಗಭೂಮಿಯಲ್ಲೂ ತೊಡಗಿಸಿಕೊಂಡು ‘ನಮ್ ಟೀಮ್?! ಸ್ಥಾಪಿಸಿ ಸಂಘಟನೆಯ ಅನುಭವವನ್ನೂ ಹೊಂದಿದ್ದೇನೆ. ನೀನಾಸಂ, ರಂಗಾಯಣ, ಶಿವ ಸಂಚಾರ ತಂಡಗಳೊಂದಿಗೆ ಸಂಪರ್ಕದಲ್ಲಿದ್ದು ರಂಗ ಪ್ರಯೋಗಗಳನ್ನು ಆಯೋಜಿಸಿದ್ದಾರೆ.

ಈ ಎಲ್ಲಾ ಅನುಭವಗಳ ಆಧಾರದ ಮೇಲೆ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸ ಬದಲಾವಣೆಗೆ ಅವಕಾಶ ಕೋರಿ ‘ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಕನ್ನಡ, ಕನ್ನಡ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಬೇಕೆಂದು  ಶಿ.ಜು.ಪಾಶ ವಿನಂತಿಸಿಕೊಂಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…