ಶಿವಮೊಗ್ಗ ನ್ಯೂಸ್…

೨೦೨೧ ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ೫೧೮ ಸ್ವತ್ತು ಕಳವು ಪ್ರಕರಣ ವರದಿಯಾಗಿದ್ದು ಅಂದಾಜು ಮೌಲ್ಯ ೬,೨೩,೯೧,೨೧೪೭ ರೂ. ಎಂದು ಅಂದಾಜಿಸಲಾಗಿದೆ. ಅದರಲ್ಲಿ ೩,೦೩,೫೯,೧೭೬ ರೂ. ಮೌಲ್ಯದ ಮಾಲುಗಳನ್ನು ಪತ್ತೆ ಮಾಡಲಾಗಿದ್ದು, ಸದರಿ ಮಾಲಿನ ವಾರಸುದಾರರಿಗೆ ಬಿಟ್ಟು ಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.

ಅವರು ಇಂದು ಡಿಎಆರ್ ಸಭಾಂಗಣದಲ್ಲಿ ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲ್ ಗಳನ್ನು ವಾರಸುದಾರರಿಗೆ ಬಿಟ್ಟುಕೊಡುವ ಸಮಾರಂಭದ ಸುದ್ದಿಗಾರರೊಂದಿಗೆ ಮಾತನಾಡಿದರು.ಒಟ್ಟು ೫೧೮ ಸ್ವತ್ತು ಕಳವು, ೬ ದರೋಡೆ ಪ್ರಕರಣ, ೫೪ ಸುಲಿಗೆ ಪ್ರಕರಣ, ೧೫೧ ಕನ್ನ ಕಳವು ಪ್ರಕರಣ ಸೇರಿರುತ್ತದೆ. ಇದರಲ್ಲಿ ಒಟ್ಟು ೨೩೧ ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಅಂದಾಜು ಮೌಲ್ಯ ೧,೨೨,೧೦,೯೫೯ ರೂ. ಆಗಿರುತ್ತದೆ. ಒಟ್ಟು ೨ ಕೆಜಿ ೮೭೯ ಗ್ರಾಂ ಬಂಗಾರದ ಆಭರಣಗಳು, ೧೪,೩೯೪ ಗ್ರಾಂ ಬೆಳ್ಳಿ ಆಭರಣಗಳು, ೭೩ ವಾಹನಗಳು, ೨೭ ಮೊಬೈಲ್ ಫೋನ್ ಗಳು, ೬ ಜಾನುವಾರುಗಳು, ೩೯ ಕ್ವಿಂಟಾಲ್ ಅಡಿಕೆ, ಎಲೆಕ್ಟ್ರಾನಿಕ್ ವಸ್ತು ಹಾಗೂ ಇತರ ವಸ್ತುಗಳು ಎಲ್ಲಾ ಸೇರಿ ೩,೦೩,೫೯,೦೦೦ ರೂ.ಗಳ ಮಾಲನ್ನು ಪತ್ತೆ ಮಾಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ಕಳವು ಪ್ರಕರಣಗಳಲ್ಲಿ ಕೂಡಲೇ ಸ್ಪಂದಿಸಿ ಹಲವು ತಂಡಗಳ ರಚನೆ ಮಾಡಿ ಕಾರ‍್ಯಾಚರಣೆ ನಡೆಸಿ ರಿಕವರಿ ಮಾಡಲು ಯಶಸ್ವಿಯಾಗಿದೆ. ಇತ್ತೀಚೆಗೆ ಅಡಿಕೆ ಕಳವು ಪ್ರಕರಣ ಜಾಸ್ತಿ ವರದಿಯಾಗುತ್ತಿವೆ. ಈವರೆಗೆ ಒಟ್ಟು ೯೨೮ ಪ್ರಕರಣಗಳು ದಾಖಲಾಗಿದ್ದು, ಮೊಬೈಲ್ ರಾಬರಿ ಪ್ರಕರಣಗಳನ್ನು ಕಂಡು ಹಿಡಿದಿದ್ದೇವೆ. ಕಳ್ಳತನ ಪುನಾರವರ‍್ತನೆ ಮಾಡಿದ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ.

ಅದರಲ್ಲಿ ಹೊರ ರಾಜ್ಯದವರು ಇದ್ದಾರೆ. ಚಿಕ್ಕಮರಡಿ, ಭದ್ರಾವತಿ, ಶಿವಮೊಗ್ಗದ ಒಟ್ಟು ೮ ಡಕಾಯಿತಿ ಪ್ರಕರಣಗಳನ್ನು ಭೇದಿಸಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ ೧೭೭ ದ್ವಿಚಕ್ರ ಮತ್ತು ೪ ಚಕ್ರದ ವಾಹನ ಕಳ್ಳತನವಾಗಿದ್ದು, ೭೮ ರಿಕವರಿಯಾಗಿದೆ. ಪೌರ ಕಾರ‍್ಮಿಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಜನರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಹಣಗೆರೆ ಕಟ್ಟೆಯ ಪ್ರಕರಣದಲ್ಲೂ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದರು.

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಸಾರ್ವಜನಿಕರಿಂದ ಮೆಚ್ಚುಗೆಯ ಅಭಿನಂದನೆಗಳು…

ಈ ಸಂದರ್ಭದಲ್ಲಿ ಕಳವು ಪ್ರಕರಣ ಮತ್ತು ಇನ್ನಿತರ ಪ್ರಕರಣಗಳಲ್ಲಿ ಶಕ್ತಿ ಮೀರಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶೇಖರ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಈಶ್ವರ ನಾಯ್ಕ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಸಂತ್ರಸ್ಥರಿಗೆ ರಿಕವರಿಯಾದ ಅವರ ಸ್ವತ್ತನ್ನು ಮರುಕಳಿಸಲಾಯಿತು. ಅವರು ಕೂಡ ಪೊಲೀಸರ ಕಾರ‍್ಯಕ್ಕೆ ಅಭಿನಂದಿಸಿದರು. 

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…