ಶಿವಮೊಗ್ಗ ನ್ಯೂಸ್…
ಕಟ್ಟಡ ಕಾರ್ಮಿಕರು ಗುರುತಿನ ಚೀಟಿಯನ್ನು ಪಡೆಯುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ರಾಜೀವ್‌ಗಾಂಧಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ರಮೇಶ್ ಕರೆ ನೀಡಿದರು.
ಅವರು ಇಂದು ಕಲ್ಲಗಂಗೂರಿನಲ್ಲಿ ರಾಜೀವ್ ಗಾಂಧಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಆನ್ಲೈನ್ ಮೂಲಕ ನೊಂದಣಿ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ. ಇವುಗಳನ್ನು ಬಳಸಿಕೊಳ್ಳುಬ ಬಗ್ಗೆ ಕಟ್ಟಡ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕಷ್ಟೆ. ಈ ಜಾಗೃತಿ ಮೂಡಿಸುವ ಮತ್ತು ಗುರುತಿನ ಚೀಟಿಯನ್ನು ನೀಡಲು ಸಹಾಯಕವಾಗಿ ನಮ್ಮ ಸಂಸ್ಥೆ ಉಚಿತವಾಗಿ ಕೆಲಸ ಮಾಡುತ್ತಿದೆ. ಇದರ ಸೌಲಭ್ಯಗಳನ್ನು ಕಟ್ಟಡ ಕಾರ್ಮಿಕರು ಪಡೆಯಬೇಕು ಎಂದರು.
ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ. ಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಗುರುತಿನ ಚೀಟಿ ಪಡೆದ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನರ್ಸರಿಯಿಂದ ಬಿಇ ತನಕ ಪ್ರತಿ ವರ್ಷ ಹಣ ನೀಡಲಾಗುತ್ತದೆ. ನರ್ಸರಿಗೆ ೫ ಸಾವಿರ ನೀಡಿದರೆ, ಹೈಸ್ಕೂಲ್‌ಗೆ ೧೨ ಸಾವಿರ, ಕಾಲೇಜಿಗೆ ೪೦ ಸಾವಿರ, ವೃತ್ತಿ ತರಬೇತಿಗಳಿಗೆ ೨೫ ಸಾವಿರ, ಎಲ್‌ಎಲ್‌ಬಿಗೆ ೩೦ ಸಾವಿರ, ಸ್ನಾತಕೋತ್ತರ ಪದವಿಗೆ ೩೦ ಸಾವಿರ, ಬಿಇ ಅಥವಾ ಮೆಡಿಕಲ್‌ಗೆ ೫೦ ಸಾವಿರ ರೂ.ಗಳನ್ನು ಸರ್ಕಾರ ನೀಡುತ್ತದೆ. ಹಾಗೆಯೇ ಎಂಟೆಕ್, ಎಂಡಿಗೆ ಕ್ರಮವಾಗಿ ೬೦ ಸಾವಿರ, ೭೫ ಸಾವಿರ ನೀಡುತ್ತದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ೨೫ ಸಾವಿರ ಪ್ರತಿ ವರ್ಷ ನೀಡುತ್ತದೆ ಎಂದರು.ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣವೇ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡುತ್ತದೆ. ತಮ್ಮ ಮಕ್ಕಳನ್ನೂ ಕಟ್ಟಡ ಕಾರ್ಮಿಕರನ್ನಾಗಿ ಮಾಡದೇ ವಿದ್ಯಾಭ್ಯಾಸ ಕೊಡಿ ಎಂದು ಮನವಿ ಮಾಡಿದರು.
ಬರೀ ಶಿಕ್ಷಣಕ್ಕೆ ಅಲ್ಲದೆ, ಮಕ್ಕಳ ಮದುವೆ, ಅಪಘಾತದಲ್ಲಿ ಮೃಪಟ್ಟರೆ ಪರಿಹಾರ, ಮನೆ ಕಟ್ಟಲು ಸಾಲ, ನಿವೃತ್ತಿ ವೇತನ ಹೀಗೆ ಹಲವು ಸೌಲಭ್ಯಗಳು ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೀಡಲಿದೆ. ಈ ಎಲ್ಲ ಹಣ ಕಾರ್ಮಿಕರದ್ದೇ ಆಗಿದೆ. ಸುಮಾರು ೨೫ ಸಾವಿರ ಕೋಟಿ ಹಣ ರಾಜ್ಯ ಸರ್ಕಾರದ ಬಳಿ ಇದೆ. ಈ ಹಣದಲ್ಲಿಯೇ ಈ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಣ್ಣಪ್ಪ, ಸದಸ್ಯೆ ಗುಳ್ಳಮ್ಮ, ಮುಜೀಬ್ ಸೇರಿದಂತೆ ಹಲವರಿದ್ದರು.ಎಸ್‌ಎಂಎಸ್‌ಎಸ್‌ನ ತೆರೇಸಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಸ್ವಾಗತಿಸಿದರು.