ಶಿವಮೊಗ್ಗ ನ್ಯೂಸ್…
ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕನ್ನು ಕಸಿಯುವ ಕೆಲಸ ಮಾಡಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೇ ನನ್ನನ್ನು ಗೆಲ್ಲಿಸುವಂತೆ ವಿಧಾನ ಪರಿಷತ್ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಗ್ರಾಪಂ ಸದಸ್ಯರಲ್ಲಿ ಮನವಿ ಮಾಡಿದರು.
ಅವರು ಇಂದು ನಗರದ ಮಾತಾ ಮಾಂಗಲ್ಯ ಮಂದಿರದಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಭೆ ಉದ್ದೇಶಿಸಿ ಮಾತನಾಡಿದರು. ಇಂದು ಕೇವಲ ಶೀವಮೊಗ್ಗ ಮತ್ತು ಭದ್ರಾವತಿ ಗ್ರಾಪಂ ಸದಸ್ಯರ ಸಭೆ ಕರೆದಿದ್ದೆ. ಒಟ್ಟು 547 ಗ್ರಾಪಂ ಸದಸ್ಯರಲ್ಲಿ 295 ಜನ ಬಂದು ಸಹಿ ಹಾಕಿದ್ದಾರೆ. ಇದು ನಮ್ಮ ಗೆಲುವು ಖಚಿತ ಎಂಬುದಕ್ಕೆ ನಿದರ್ಶನವಾಗಿದೆ ಎಂದರು.ಗ್ರಾಪಂ ನ ಎಲ್ಲಾ ಸದಸ್ಯ ಸ್ನೇಹಿತರಿಗೆ ಯಾವುದೇ ರೀತಿ ಕುಂದು ಬರದ ರೀತಿಯಲ್ಲಿ ನಾನು ನಡೆದುಕೊಳ್ಳುತ್ತೇನೆ. ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ತಾವು ನಿಮ್ಮನ್ನೇ ಬೆಂಬಲಿಸುವುದಾಗಿ ಹೇಳಿದ್ದಾರೆ. ಅನೇಕ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರಿಗೆ ಯಾವುದೇ ಅನುದಾನ ಬಾರದೇ ಇರುವುದರಿಂದ ಭ್ರಮನಿರಸನವಾಗಿದೆ ಎಂದರು.
ನಾನು ಹಿಂದೆ ವಸತಿ ಸಚಿವ ವಿ. ಸೋಮಣ್ಣ ಬಂದಾಗ ಪ್ರತಿ ಗ್ರಾಪಂ ಗೆ ಕನಿಷ್ಟ 100 ಮನೆಗಳನ್ನು ನೀಡುವಂತೆ ವಿನಂತಿಸಿದ್ದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಪಂಗಳಿಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಬರಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಕೇಂದ್ರೀಕರಣ ವಿರೋಧಿಸುತ್ತಾ ಸದಸ್ಯರ ಹಕ್ಕನ್ನು ಮೊಟಕುಗೊಳಿಸುತ್ತಿದೆ. ಬಂದ ಅಲ್ಪಸ್ವಲ್ಪ ಅನುದಾನ ಸದಸ್ಯರ ಗಮನಕ್ಕೆ ತರದೇ ಪಿಡಿಓಗಳು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದಾರೆ ಎಂದರು.ಕೋವಿಡ್ ಹೆಸರು ಹೇಳಿ ಭಯ ಹುಟ್ಟಿಸಿ ಕಳೆದ ಎರಡು ವರ್ಷದಿಂದ ಗ್ರಾಪಂ ಗಳಿಗೆ ಒಂದು ರೂ ಅನುದಾನವನ್ನು ಬಿಜೆಪಿ ಸರ್ಕಾರ ನೀಡಿಲ್ಲ. ಎನ್.ಆರ್.ಇ.ಜಿ. ಯೋಜನೆ ಹಣ ಕೂಡ ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಈ ಸರ್ಕಾರವಿಲ್ಲ. ಒಟ್ಟು 4170 ಮತದಾರರಲ್ಲಿ 3895 ಗ್ರಾಪಂ ಸದಸ್ಯರೇ ಇದ್ದಾರೆ. ಉಳಿದ ಸ್ಥಳೀಯ ಸಂಸ್ಥೆಗಳದ್ದು ಕೇವ ಲ 300 ಮತಗಳಷ್ಟೆ. ನೀವೇ ಅಭ್ಯರ್ಥಿ ಎಂದು ತಿಳಿದು ನನ್ನನ್ನು ಬೆಂಬಲಿಸಿ ಮತ್ತು ಉಳಿದ ಸದಸ್ಯರ ಮತವನ್ನು ಹಾಕಿಸಿ ಎಂದರು.ಈಗಾಗಲೇ ನಾನು ಗೆದ್ದಾಗಿದೆ. ಆದರೆ, ಗೆಲವಿನ ಅಂತರ ಹೆಚ್ಚಿಸಲು ನೆರವಾಗಿ. ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಈ ಚುನಾವಣೆ ಫಲಿತಾಂಶ ಬೀರಲಿದ್ದು, ಮುಂದೆ ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಗ್ರಾಪಂಗಳಿಗೆ ಹೆಚ್ಚಿನ ಅಭಿವೃದ್ಧಿಗೆ ಅನುದಾನ ನೀಡುತ್ತೇವೆ ಎಂದರು.
ಆರ್.ಎಂ. ಮಂಜುನಾಥಗೌಡ ಮಾತನಾಡಿ, ಬಿಜೆಪಿಯ ನೋಟು ತೆಗೆದುಕೊಂಡು ಕಾಂಗ್ರೆಸ್ ಗೆ ಓಟು ಹಾಕಿ. ಪಕ್ಷೇತರರು ಕೂಡ ಬಹಳ ಸದಸ್ಯರಿದ್ದು, ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಗೆ ಮತ ಹಾಕಿಸಿ. ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕುಂಟು ನೆಪವೊಡ್ಡಿ ಮುಂದಕ್ಕೆ ಹಾಕಿದ್ದಾರೆ. ಕೃಷಿ ಕಾಯ್ದೆ ವಾಪಸ್ ಪಡೆದಿದ್ದು, ಬಿಜೆಪಿ ಸೋಲು ಪ್ರಾರಂಭವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮುಖಂಡರಾದ ಎನ್. ರಮೇಶ್, ದೇವಿಕುಮಾರ್, ವಿಜಯಕುಮಾರ್, ಕಿರಣ್, ರವಿಕುಮಾರ್, ವೇದಾ ವಿಜಯಕುಮಾರ್, ಡಾ. ಶ್ರೀನಿವಾಸ ಕರಿಯಣ್ಣ, ಹೆಚ್.ಸಿ. ಯೋಗೀಶ್, ಪಲ್ಲವಿ, ಜಗದೀಶ್, ಶರತ್, ಮೋಹನ್, ತಿಮ್ಮಣ್ಣ, ರಾಜಶೇಖರ್, ವಿಜಯಲಕ್ಷ್ಮಿ ಪಾಟೀಲ್, ಗಿರೀಶ್, ಮಧುಸೂದನ್, ಚೇತನ್ ಇದ್ದರು.