ಶಿವಮೊಗ್ಗ ನ್ಯೂಸ್…

ದಲಿತ ಚಳವಳಿಯ ಯಶಸ್ವಿಗೆ ಸಿದ್ದಲಿಂಗಯ್ಯ ಅವರ ಕವಿತೆಗಳ ಕೊಡುಗೆಯೂ ಬಹುಮುಖ್ಯವಾಗಿದ್ದು, ಇಪ್ಪತ್ತನೇ ಶತಮಾನದಲ್ಲಿ ಜನಪರ ಚಳವಳಿಗಳಿಗೆ ಸಾಹಿತ್ಯಿಕ ಸಂಹಿತೆಯನ್ನು ಕೊಟ್ಟ ಕೀರ್ತಿ ಕವಿ ಸಿದ್ದಲಿಂಗಯ್ಯ ಅವರಿಗೆ ಸಲ್ಲುತ್ತದೆ ಎಂದು ಪತ್ರಕರ್ತ, ಕವಿ ಎನ್. ರವಿಕುಮಾರ್ ಟೆಲೆಕ್ಸ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ನಡ ಸ್ನಾತಕೋತ್ತರ ಅಧ್ಯಯನವಿಭಾಗ,-ಐಕ್ಯೂಎಸಿ ಇವರು ಇಂಡಿಯಾ ಅಸೋಸಿಯೇಷನ್ ಆಫ್ ಸೇಂಟ್ ಲೂಯಿಸ್, ಅಮೇರಿಕಾ ಸಹಯೋಗದಲ್ಲಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಜುಬೇದಾ ವಿದ್ಯಾಸಂಸ್ಥೆ ಸಹಕಾರದೊಂದಿಗೆ ಇಂದು ಆಯೋಜಿಸಿದ್ದ “ಕವಿಸಿದ್ದಲಿಂಗಯ್ಯ ಬಡವರ ನಗುವಿನ ಶಕ್ತಿ” ಅಂತರಾಷ್ಟ್ರೀಯ ಮಟ್ಟದ ಅಂತರ್ ಜಾಲ ವಿಚಾರ ಸಂಕಿರಣದಲ್ಲಿ “ಸಿದ್ದಲಿಂಗಯ್ಯ ಅವರ ಕವಿತೆಗಳು ಮತ್ತು ಚಳವಳಿ” ಕುರಿತು ಸಂಪನ್ಮೂಲವ್ಯಕ್ತಿಗಳಾಗಿ ಅವರು ಮಾತನಾಡಿದರು.ಭಾರತವನ್ನೂ ಒಳಗೊಂಡಂತೆ ಜಗತ್ತಿನ ಯಾವುದೇ ಜನಪರ ಚಳವಳಿಗಳಿಗೆ ಸಾಹಿತ್ಯಿಕ,ಸಾಂಸ್ಕøತಿಕ ತಳಹದಿ ಇದ್ದೇ ಇರುತ್ತದೆ. ಅದರಂತೆ ದಲಿತ ಚಳವಳಿಗೆ ಸಾಹಿತ್ಯಿಕ ಸಂಹಿತೆಯನ್ನು ಕೊಟ್ಟ ಕೀರ್ತಿ ಸಿದ್ದಲಿಂಗಯ್ಯ ಅವರಿಗೆ ಸಲ್ಲುತ್ತದೆ. ದಲಿತ ಚಳುವಳಿಯಾದಿಯಾಗಿ ಇಂದಿನ ಯಾವುದೇ ಜನಪರ ಚಳವಳಿಗೆ ಸಿದ್ದಲಿಂಗಯ್ಯ ಅವರ ಕವಿತೆಗಳು ಆರಂಭ ಮತ್ತು ಅಂತ್ಯದ ಗೀತೆಗಳಾಗಿಯೂ ಉಳಿದಿರುವುದು ಕವಿತೆಗಳ ಅಂತಃಶಕ್ತಿಯ ಸಂಕೇತವಾಗಿವೆ ಎಂದರು.

ಸಿದ್ದಲಿಂಗಯ್ಯ ಅವರ ಕವಿತೆಗಳು ಸಾಮಾಜಿ ಅಸಮಾನತೆಯನ್ನು, ಪ್ರಭುತ್ವದ ಧೋರಣೆಯನ್ನು ಬಯಲು ಮಾಡುವ, ಪ್ರಶ್ನಿಸುವ ಜೊತೆಗೆ ಹೋರಾಟದ ಪ್ರಚೋದಕ ಶಕ್ತಿಯಾಗಿ ತನ್ನ ಪ್ರಭಾವವನ್ನು ಬೀರುತ್ತವೆ. ಇದು ಹಿಂದಿಗೂ, ಇಂದಿಗೂ ಮತ್ತು ಮುಂದಿನ ದಿನಕ್ಕೂ ಅವರ ಕವಿತೆಗಳು ಅಗತ್ಯತೆಯನ್ನು ಉಳಿಸಿಕೊಂಡು ಬರುತ್ತಿವೆ. ಯಾವುದೇ ಚಳವಳಿಗೆ ಸಾಹಿತ್ಯಿಕ ಸ್ಪರ್ಶವಿಲ್ಲದೆ ಹೋದರೆ ಅಂತಹ ಚಳವಳಿ ಪರಿಣಾಮಕಾರಿ ಯಶಸ್ಸನ್ನು ಕಾಣುವುದು ಕಷ್ಟ ಎನ್ನಬಹುದು. ಕವಿತೆ ಶಕ್ತಿಶಾಲಿ ಅಭಿವ್ಯಕ್ತಿ ಮಾಧ್ಯಮವಾಗಿದ್ದು, ದಮನಿತ ಜಾತಿಗಳ ನುಡಿಗಟ್ಟುಗಳ ಆ ಮೂಲಕ ಜನಸಾಮಾನ್ಯರಿಗೆ ಚಳವಳಿಯ ಅರಿವು ಮೂಡಿಸುವಲ್ಲಿ, ಮತ್ತು ಅದೇ ಕಾಲಕ್ಕೆ ಬಲಾಢ್ಯರ, ಅಧಿಕಾರಸ್ಥರನ್ನು ಎಚ್ಚರಿಸುವ ಸಾಹಿತ್ಯ ಪ್ರಭಾವವನ್ನು ಬೀರುವ ಶಕ್ತಿ ಸಿದ್ದಲಿಂಗಯ್ಯ ಅವರ ಕವಿತೆಗಳಲ್ಲಿ ಅಡಗಿವೆ ಎಂದು ವಿಶ್ಲೇಷಿಸಿದರು. ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಡಾ. ಉಮೇಶ್ ಕುಂಸಿ ಅವರು ಮಾತನಾಡಿ, ಸಿದ್ದಲಿಂಗಯ್ಯ ಕನ್ನಡಕ್ಕೆ ಅವೈದಿಕ ಲೋಕದರ್ಶನವನ್ನು ಕೊಟ್ಟ ಮಹತ್ವದ ಕವಿ, ಅಸ್ಪøಶ್ಯ ಭಾರತದ ಹಿಂದಿರುವ ಪ್ರಜ್ಞೆ ಸಿದ್ದಲಿಂಗಯ್ಯ ಅವರ ಕವಿತೆಗಳೇ ಆಗಿದ್ದವು. ಜನಸಾಮಾನ್ಯರ ಭಾಷೆಯನ್ನು ಕಾವ್ಯಭಾಷೆಯನ್ನಾಗಿಸಿದ ಕೊಟ್ಟ ಕೊಡುಗೆ ಅಮೂಲ್ಯವಾದದ್ದು ಎಂದರು.

ಸಿದ್ದಲಿಂಗಯ್ಯ ಅವರು ಕಾವ್ಯದ ಹಿಂದಿರುವ ಶಕ್ತಿ ಎಂದರೆ ಅದು ಕಣ್ಣೀರು, ನಿಟ್ಟುಸಿರುಗಳೇ ಆಗಿದ್ದವು. ಇಷ್ಟಾದರೂ ಅವರಂತ ವಿನಯವಂತ ಕವಿ ಸಾಹಿತಿ ಮತ್ತೋರ್ವರಿಲ್ಲ. ದಲಿತ ಚಳವಳಿಯ ಆರಂಭಿಕ ಮತ್ತು ಅಂತ್ಯ ಸಿದ್ದಲಿಂಗಯ್ಯ ಅವರ ಕವಿತೆಗಳಿಂದಲೇ ಕೊನೆಗೊಳ್ಳುವಷ್ಟು ಪ್ರಭಾವಿತವಾಗಿದ್ದವು. ಸಿದ್ದಲಿಂಗಯ್ಯ ಅವರ ಕವಿತೆಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದರು. ಡಾ. ರಾಜಪ್ಪ ದಳವಾಯಿ ಅವರು ಸಿದ್ದಲಿಂಗಯ್ಯ ಅವರ ವ್ಯಕ್ತಿತ್ವದ ಕುರಿತು ಮಾತನಾಡಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…