ಶಿವಮೊಗ್ಗ ನ್ಯೂಸ್…
ಸನಾತನ ಹಿಂದೂ ಸಮಾಜ ಪರಿಷತ್ ಶಿವಮೊಗ್ಗ ವತಿಯಿಂದ ನವೆಂಬರ್ 27 ರಂದು ಬೆಳಗ್ಗೆ 10.30 ಕ್ಕೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಕನಕದಾಸ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.ದೇಶದಲ್ಲಿ ಮಹಾತ್ಮರನ್ನು, ದಾರ್ಶನಿಕರನ್ನು ನಾವುಗಳು ಒಂದು ಜಾತಿಗೆ, ಒಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿದ್ದು, ಇದನ್ನು ಸರಿಪಡಿಸಲು ಪರಿಷತ್ ಅಂತಹ ದಾರ್ಶನಿಕರ ಮಹಾತ್ಮರ ಜಯಂತಿಯನ್ನು ಕೇವಲ ಒಂದು ಸಮುದಾಯ, ವರ್ಗಕ್ಕೆ ಸೀಮಿತಗೊಳಿಸದೇ ಸಮಸ್ತ ಮಾನವ ಕುಲದ ವತಿಯಿಂದ ಆಚರಿಸಬೇಕೆಂಬ ಉದ್ದೇಶದಿಂದ ಈ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಸಂಚಾಲಕ ಡಾ. ದಿಲೀಪ್ ಕುಮಾರ್ ಪಾಂಡೆ ಎಸ್.
ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶ್ರೇಷ್ಠ ಸಂತರಾದ ಕನಕದಾಸರು ತಮ್ಮ ಶುದ್ಧ ಭಕ್ತಿಯ ಮೂಲಕ, ಶ್ರೇಷ್ಠ ದಾಸ ಸಾಹಿತ್ಯದ ಮೂಲಕ ಲೋಕಕ್ಕೆ ಪೂಜನೀಯರಾಗಿ ಸಮಸ್ತ ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿ ಮಹೋತ್ಸವದ ಸಮಾರಂಭದಲ್ಲಿ ನಾಡಿನ ಶ್ರೇಷ್ಠ 6 ಪರಮ ಪೂಜ್ಯರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಶಿವಮೊಗ್ಗ ನಗರ ಭಜನಾ ಮಂಡಳಿಗಳ ಒಕ್ಕೂಟದ ಮಾತೆಯರಿಂದ ಕನಕದಾಸರ ಕೃತಿಗಳ ಸಮೂಹ ಗಾಯನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಶ್ರೀ ಆದಿಚುಂಚನಿಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥರು, ಹರಿಪುರ ಶ್ರೀ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ವಹಿಸಲಿದ್ದಾರೆ ಎಂದರು.ಪರಿಷತ್ ವತಿಯಿಂದ ದಾರ್ಶನಿಕರ ಹಾಗೂ ಮಹಾತ್ಮರ ಜಯಂತಿಯನ್ನು ಆಚರಿಸಲು ಉದ್ದೇಶಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ರಾಜ್ಯ ಸಂಚಾಲಕ ಸತ್ಯನಾರಾಯಣ, ಶಿವಮೊಗ್ಗ ಸಂಚಾಲಕರಾದ ರಮೇಶ್ ಬಾಬು, ಸದಸ್ಯೆ ಮಮತಾ ಸುಧೀಂದ್ರ ಉಪಸ್ಥಿತರಿದ್ದರು.