ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಸ್ಮಾರ್ಟ್ ಸಿಟಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ತಡೆದರು.
ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ತುಂಬಾ ಕಳಪೆಯಿಂದ ಕೂಡಿವೆ.ಕಾಮಗಾರಿಗಳು ಆರಂಭವಾದ ದಿನದಿಂದ ಇಲ್ಲಿಯವರೆಗೆ ಸುಮಾರು 394.92 ಕೋಟಿ ಖರ್ಚಾಗಿದೆ ಎಂದು ಯೋಜನೆಯ ವರದಿಯಲ್ಲಿ ಹೇಳಲಾಗಿದೆ. ಈ ಯೋಜನೆಗೆ ಒಟ್ಟು 494 ಕೋಟಿ ರೂ. ಮಂಜೂರಾಗಿದ್ದು, ಈಗ 99.08 ಕೋಟಿ ರೂ. ಮಾತ್ರ ಉಳಿದುಕೊಂಡಿದೆ. ಇದು ಬಾಕಿ ಉಳಿದಿರುವ ಕಾಮಗಾರಿಗಳಿಗೆ ಸಾಕಾಗುತ್ತದೆ ಎಂಬ ನಂಬಿಕೆ ಇಲ್ಲ ಎಂದರು.394.92 ಕೋಟಿ ರೂ. ಎಲ್ಲಿ ಖರ್ಚಾಗಿದೆ ಎಂದು ಗೊತ್ತೇ ಇಲ್ಲ. ಇದು ಹಲವು ಸಂಶಯಕ್ಕೂ ಕಾರಣವಾಗಿದೆ. ಇಷ್ಟೊಂದು ಹಣ ಈಗ ನಡೆದಿರುವ ಕಾಮಗಾರಿಗೆ ವಿನಿಯೋಗವಾಗಿಲ್ಲ ಎಂದು ಮೇಲುನೋಟಕ್ಕೆ ಗೊತ್ತಾಗುತ್ತದೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿ ಅನುಷ್ಠಾನ ಮಾಡುತ್ತಿರುವ ಮಹಾನಗರ ಪಾಲಿಕೆ ಆಯುಕ್ತರು ನಿರ್ಲಕ್ಷ್ಯ ಭಾವನೆ ಹೊಂದಿದ್ದು, ತಮ್ಮ ಹೊಣೆಗಾರಿಕೆಯನ್ನೇ ಮರೆತುಬಿಟ್ಟಿದ್ದಾರೆ. ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಮಿಷನ್ ಸ್ವೀಕರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇರ ಆರೋಪ ಮಾಡಿದ್ದಾರೆ.ಯಾವ ಅರ್ಹ ಗುತ್ತಿಗೆದಾರನು ಇಲ್ಲಿ ಇಲ್ಲ.ಅನುಭವಗಳೇ ಇಲ್ಲದ ಗುತ್ತಿಗೆದಾರರಿಗೆ ಸ್ಮಾರ್ಟ್ ಸಿಟಿ ಕೆಲಸ ನೀಡಲಾಗಿದೆ. ಯಾರು ಗುತ್ತಿಗೆದಾರ, ಕೆಲಸ ಹೇಗೆ ನಡೆಯುತ್ತಿದೆ. ಕಳಪೆ ಇದ್ದರೂ ಯಾಕೆ ಕೇಳುತ್ತಿಲ್ಲ. ಭ್ರಷ್ಟಾಚಾರ ಮಿತಿ ಮೀರಿದ್ದರೂ ಅಧಿಕಾರಿಗಳೇಕೆ ಸುಮ್ಮನಿದ್ದಾರೆ ಎಂಬ ಹಲವು ಪ್ರಶ್ನೆಗಳು ಇಡೀ ಶಿವಮೊಗ್ಗದ ನಾಗರಿಕರನ್ನು ಕಾಡುವುತ್ತಿರುವುದಂತೂ ನಿಜ.
ಆದ್ದರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮತ್ತು ಟೆಂಡರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಯೋಗೀಶ್, ರೇಖಾ ರಂಗನಾಥ್, ಮೆಹಖ್ ಶರೀಪ್, ಶಾಮೀರ್ ಖಾನ್, ವೈ.ಹೆಚ್. ನಾಗರಾಜ್, ರಾಮೇಗೌಡ, ಜಿ.ಡಿ. ಮಂಜುನಾಥ್, ಹೆಚ್.ಪಿ. ಗಿರೀಶ್, ಚಂದ್ರಭೂಪಾಲ್, ಸೌಗಂಧಿಕಾ, ವಿಜಯಲಕ್ಷ್ಮಿ ಪಾಟೀಲ್, ಸುವರ್ಣಾ, ಚಂದ್ರಕಲಾ, ಕವಿತಾ, ಮೂರ್ತಿ, ಆಸೀಫ್, ಕಾಶಿ ವಿಶ್ವನಾಥ್, ನಾಗರಾಜ್, ಆರೀಫ್ ಮೊದಲಾದವರಿದ್ದರು.