ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಚಾರದ ಮೊದಲ ಸುತ್ತನ್ನು ಮುಗಿಸಿದ್ದೇನೆ. ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದಾವಣೆಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ಮತ್ತು ಭಾಗಶಃ ಕ್ಷೇತ್ರವಾದ ಮಾಯಕೊಂಡದಲ್ಲಿ ಪ್ರಚಾರ ಮಾಡಿದ್ದೇನೆ. ಎಲ್ಲಾ ಕಡೆ ತಮಗೆ ಅತೀವ ಬೆಂಬಲ ವ್ಯಕ್ತವಾಗುತ್ತಿದೆ ಮತ್ತು ಈಗ 2ನೇ ಸುತ್ತು ಪ್ರಚಾರ ಇಂದಿನಿಂದಲೇ ಪ್ರಾರಂಭಿಸಿದ್ದೇನೆ. ತಮ್ಮೊಂದಿಗೆ ಕಾರ್ಯಕರ್ತರು ಮುಖಂಡರು ಆಯಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ನಾಯಕರು ತಮ್ಮ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಎಲ್ಲರ ಸಹಕಾರದೊಂದಿಗೆ ತಾವು ಈ ಬಾರಿ ಗೆಲ್ಲುವುದು ಸುಲಭವಾಗಿದೆ ಎಂದರು.ಕಳೆದ ಬಾರಿ ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೆ, ಸರ್ಕಾರದ ಅನುದಾನದ ಕೊರತೆಯಿಂದಾಗಿ ಪೂರ್ಣ ಪ್ರಮಾಣದ ಕೆಲಸ ಮಾಡಲು ಆಗಿಲ್ಲ.
ಬಿಜೆಪಿ ಸರ್ಕಾರ ಗ್ರಾಮಪಂಚಾಯಿತಿಗಳು ಗಟ್ಟಿಗೊಳ್ಳಲು ಯಾವ ಕ್ರಮವನ್ನು ಕೈಗೊಳ್ಳಲಿಲ್ಲ. 2 ಕೋ ರೂ.ಅನುದಾನದಲ್ಲಿ ಕೇವಲ 1 ಕೋ.ರೂ.ಮಾತ್ರ ಬಿಡುಗಡೆ ಮಾಡಿದ್ದರು. ಕೋವೀಡ್ ಕೂಡ ಅಭಿವೃದ್ಧಿಗೆ ಹಿನ್ನಡೆಯಾಯಿತು. ಈ ಎಲ್ಲಾ ಕೆಲಸಗಳನ್ನು ತಾವು ಗೆದ್ದ ಮೇಲೆ ಪೂರ್ಣಗೊಳಿಸುವುದಾಗಿ ತಿಳಿಸಿದರು.ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಗ್ರಾಮೀಣ ರಸ್ತೆಗಳು ಸೇರಿದಂತೆ ಹಲವು ಕೆಲಸಗಳು ಬಾಕಿ ಉಳಿದುಕೊಂಡಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಆಶ್ರಯ ಮನೆಗಳನ್ನು ನೀಡಿದ್ದು ಬಿಟ್ಟರೆ ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಆಶ್ರಯ ಮನೆಗಳು ನೀಡಿಲ್ಲ. ಅಲ್ಲದೆ 14ನೇ ಹಣಕಾಸು ಯೋಜನೆಯಲ್ಲಿ ನಿಗಧಿಪಡಿಸದಿಕ್ಕಿಂತ 15ನೇ ಹಣಕಾಸು ಯೋಜನೆಯಲ್ಲಿ ಹಣ ಕಡಿತಗೊಳಿಸಲಾಗಿದೆ ಎಂದರು.ಬಿ.ಎಸ್.ಯಡಿಯೂರಪ್ಪ ಅವರ ಪ್ರಚಾರದಿಂದ ತಮಗೆ ಯಾವ ತೊಂದರೆಯೂ ಆಗಿಲ್ಲ. ಅಲ್ಲದೆ ದೇವೇಗೌಡರು ಮೋದಿ ಅವರ ಭೇಟಿ ಮಾಡಿದ ವಿಷಯವೂ ಶಿವಮೊಗ್ಗ ಕ್ಷೇತ್ರದ ಮೇಲೆ ಪರಿಣಾಮ ಬೀರುವುದಿಲ್ಲ. ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಕೂಡ ನನಗೆ ಲಭಿಸಲಿವೆ. ಸೊರಬದಲ್ಲಿ ಜೆಡಿಎಸ್ನ ಲ್ಲಿದ್ದ ಮಧುಬಂಗಾರಪ್ಪ ಕಾಂಗ್ರೆಸ್ ಸೇರಿರುವುದರಿಂದ ನಮಗೆ ಬಲ ಬಂದಂತಾಗಿದೆ. ಭದ್ರಾವತಿಯಲ್ಲಿ ಅಪ್ಪಾಜಿಗೌಡ ಬೆಂಬಲಿತರು ತಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರ ನೆರವನ್ನು ಕೂಡ ಕೇಳಿದ್ದೇವೆ. ತೀರ್ಥಹಳ್ಳಿ ಆರ್.ಎಂ.ಮಂಜುನಾಥ್ಗೌಡಡ ಮತ್ತು ಕಿಮ್ಮನೆ ರತ್ನಾಕರ್ ಈಗಾಗಲೇ ತಮ್ಮ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ಎಲ್ಲರ ಸಹಕಾರದೊಂದಿಗೆ ತಮ್ಮ ಗೆಲುವು ಅತ್ಯಂತ ಸುಲಭವಾಗಿದೆ ಎಂದರು.
ಇದರ ಜೊತೆಗೆ ಡಿ.3ರಂದು ಶಿವಮೊಗ್ಗಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಬರಲಿದ್ದಾರೆ. ಅಂದು ಮಧ್ಯಾಹ್ನ 3ಗಂಟೆಗೆ ನಗರದ ಸರ್ಜಿ ಕಲ್ಯಾಣ ಮಂದಿರದಲ್ಲಿ ವಿಶೇಷ ಸಭೆ ಇದೆ. ಇಲ್ಲಿ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳು ಭಾಗವಹಿಸುತ್ತಾರೆ. ಕಾಂಗ್ರೆಸ್ ಮುಖಂಡರು ಜನಪ್ರತಿನಿಧಿಗಳಿಗೆ ತಮ್ಮ ಬೆಂಬಲ ಕೋರುತ್ತಾರೆ. ಇದೊಂದು ವಿಶೇಷ ಸಭೆಯಾಗಿದೆ. ಜನಪ್ರತಿನಿಧಿಗಳು ಹೆಚ್ಚು ಸಂಖ್ಯೆಯಲ್ಲಿ ಬರಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮುಖಂಡರಾದ ಎನ್.ರಮೇಶ್, ಕಲಗೋಡು ರತ್ನಾಕರ್, ಹೆಚ್.ಸಿ.ಯೋಗೀಶ್, ಎಸ್.ಪಿ.ದಿನೇಶ್, ಇಕ್ಕೇರಿ ರಮೇಶ್, ವಿಜಯ್ಕುದಮಾರ್, ಯು.ಶಿವಾನಂದ, ದೇವಿಕುಮಾರ್ ಉಪಸ್ಥಿತರಿದ್ದರು.