ಮಹಾನಗರ ಪಾಲಿಕೆಗೆ ಸೇರಿದ ಜಾಗವನ್ನು ಯಾರಿಗೂ ಪರಭಾರೆ ಮಾಡಬಾರದು ಎಂದು
ಆಗ್ರಹಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ವತಿಯಿಂದ ಇಂದು ಪಾಲಿಕೆ ಎದುರು ಪ್ರತಿಭಟನೆ
ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ತಾಲ್ಲೂಕು ನಿಧಿಗೆ ಹೋಬಳಿ ಊರುಗಡೂರು ಗ್ರಾಮದ ಸರ್ವೆ ನಂಬರ್ 17/6ರಲ್ಲಿ
1.2 ಎಕರೆ ಮಹಾನಗರ ಪಾಲಿಕೆಗೆ ಸೇರಿದ ಉದ್ಯಾನವನ ಇದ್ದು, ಈ ಹಿಂದೆ ಅದನ್ನು ಪರಭಾರೆ
ಮಾಡಲಾಗಿತ್ತು. ಆದರೆ ನಂತರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಾಶೀಲ್ದಾರ್
ಅವರುಗಳು ಖಾಸಗಿ ವ್ಯಕ್ತಿಗೆ ಅಕ್ರಮವಾಗಿ ಭೂ ಪರಿವರ್ತನೆ ಮಾಡಿ ಕೊಟ್ಟಿದ್ದನ್ನು ಈಗಿನ
ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಈ
ಹಿಂದೆ ನೀಡಿದ ಭೂಪರಿವರ್ತನೆ ಆದೇಶವನ್ನು ಸಂಪೂರ್ಣವಾಗಿ ರದ್ದು ಮಾಡಿರುವುದರಿಂದ
ಅದನ್ನು ತಕ್ಷಣ ಮಹಾನಗರಪಾಲಿಕೆಯ ಆಸ್ತಿಯೆಂದು ಬದಲಾಯಿಸಿಕೊಳ್ಳುವ ಕೊಳ್ಳುವಂತೆ
ಪ್ರತಿಭಟನಾಕಾರರು ಆಗ್ರಹಿಸಿದರು.
ಊರುಗಡೂರು ಗ್ರಾಮದ ಈ ಜಾಗವು ಮಹಾನಗರಪಾಲಿಕೆಗೆ ಸೇರಿದ್ದು ಎಂದು ದಾಖಲೆಗಳ ಆಧಾರದಲ್ಲಿ
ಸ್ಪಷ್ಟವಾಗಿ ಕಂಡುಬಂದಿರುತ್ತದೆ. ಮಹಾರಾಜರ ಕಾಲದಲ್ಲಿಯೇ ಸದರಿ ಜಾಗವನ್ನು
ಉದ್ಯಾನವನಕ್ಕಾಗಿ ನೀಡಲಾಗಿತ್ತು. ಆದರೆ ಈ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಾಮಗಾರಿ
ನಡೆಯುತ್ತಿದ್ದು, ಪಾಲಿಕೆಯ ಸ್ವತ್ತಿನಲ್ಲಿ ಪರವಾನಗಿ ಪಡೆಯದೇ ಕಳೆದ 5 ವರ್ಷದಿಂದ
ಕಟ್ಟಡ ಕಾಮಗಾರಿ ನಡೆಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ಇವರಿಗೆ ನಗರಪಾಲಿಕೆಯಿಂದ 5
ಬಾರಿ ನೋಟಿಸ್ ನೀಡಡಲಾಗಿದೆ. ಇದು ಮಹಾನಗರ ಪಾಲಿಕೆ ಆಸ್ತಿ ಎಂದು ಅರ್ಜಿದಾರರಿಗೆ
ಹಿಂಬರ ನೀಡಿದ್ದಾರೆ. ಆದರೂ ಕೂಡ ಅವರು ಈ ಜಾಗದಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿದ್ದಾರೆ
ಎಂದು ಪ್ರತಿಭಟನಾಕಾರರು ದೂರಿದರು.
ಸದರಿ ಜಾಗಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲದಿದ್ದರೂ ಅಲ್ಲಿ ಕಚ್ಚಾ ರಸ್ತೆಯನ್ನು
ನಿರ್ಮಿಸಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆಯ ದಾಖಲೆಗಳಲ್ಲಿ ಸದರಿ
ಸ್ವತ್ತನ್ನು ಪಾಲಿಕೆ ಆಸ್ತಿಗೆ ಸೇರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು
ಪ್ರತಿಭಟನಕಾರರು ಆಗ್ರಹಿಸಿದರು.
15 ದಿನದೊಳಗೆ ಆಸ್ತಿಯನ್ನು ಕಂದಾಯ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಬೇಕು.
ಇಲ್ಲದಿದ್ದರೆ ಪಾಲಿಕೆ ಆಡಳಿತದ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು
ದಾಖಲಿಸಲಾಗುವುದು ಪ್ರತಿಭಟನೆಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಶೋಕ್ ಯಾದವ್, ಪ್ರಮುಖರಾದ
ಶಿವಕುಮಾರ್ ಕಸೆಟ್ಟೆ, ಡಾ. ಚಿಕ್ಕಸ್ವಾಮಿ, ವೆಂಕಟನಾರಾಯಣ, ಜನಾರ್ಧನ ಪೈ,
ಚೆನ್ನವೀರಪ್ಪ ಗಾಮನಕಟ್ಟಿ, ಕಾಮ್ರೇಡ್ ಲಿಂಗಪ್ಪ, ಪ್ರಭಾಕರ್, ತಿಮ್ಮಪ್ಪ, ಓಂಗಣೇಶ್
ಶೇಟ್ ಸೇರಿದಂತೆ ಹಲವರಿದ್ದರು.