ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರರ ನಂತರ ಮುಖ್ಯಮಂತ್ರಿಗಳು ಸಹ ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಬೀದರ್ ನ ಕಾರ್ಯಕ್ರಮವೊಂದರಲ್ಲಿ ಪೊಲೀಸರನ್ನು ಗೆಟ್ ಔಟ್ ಎಂದು ನಿಂದಿಸಿದ್ದಾರೆ. ಇವರ ವಿರುದ್ಧ ನ್ಯಾಯಾಲಯದಲ್ಲಿ ಸರ್ಕಾರದ ಅನುಮತಿಯೊಂದಿಗೆ ಪಿಸಿಆರ್ ದಾಖಲಿಸಲಾಗುವುದು ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ಕೆ.ಸಿ. ರಾಜಾವತ್ ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ರಾಜಕಾರಣಿಗಳು ಇವರನ್ನು ನಿಂದಿಸುತ್ತಿರುವುದು ವಿಪರ್ಯಾಸವಾಗಿದೆ. ಈ ಹಿಂದೆ ಆರಗ ಜ್ಞಾನೇಂದ್ರ ಅವರನ್ನು ನಾಯಿಗಳು ಎಂದು ಸಂಭೋದಿಸಿದ್ದರು.ಈಗ ಮುಖ್ಯಮಂತ್ರಿಗಳು ನಿಮ್ಮ ಅವಶ್ಯಕತೆ ಇಲ್ಲ. ಗೆಟ್ ಔಟ್ ಎಂದು ಪೊಲೀಸರನ್ನು ನಿಂದಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಇಂತಹ ಅತಿರೇಕಗಳು ನಡೆಯುತ್ತಿರುವುದು ಖಂಡನೀಯ.
ಇದು ಪೊಲೀಸರ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತದೆ ಎಂದರು.ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನಿನ ಮೊರೆ ಹೋಗಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ್ ನಾಯ್ಕ್, ಸೈಯದ್, ಗೌಸ್ ಪೀರ್, ನಜರುಲ್ಲಾ ಇದ್ದರು.