ಶಿವಮೊಗ್ಗ: ಬಿಜೆಪಿಯಲ್ಲಿನ ಅಸಮಾಧಾನದ ಹೊಗೆ, ಆಡಳಿತ ಪಕ್ಷದ ವಿರೋಧಿ ಅಲೆ, ನಾಯಕರ ನಡುವಿನ ಆತ್ಮವಿಶ್ವಾಸದ ಕೊರತೆ ಇವೆಲ್ಲವೂ ಕಾಂಗ್ರೆಸ್ ಗೆ ವರದಾನವಾಗಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಸುಮಾರು 500 ಕ್ಕೂ ಹೆಚ್ಚು ಮತಗಳ ಅಂತದಲ್ಲಿ ಗೆಲ್ಲುತ್ತಾರೆ ಎಂದು ವೀರಶೈವ ಲಿಂಗಾಯಿತ ಮುಖಂಡರು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.
ಇಂದು ಬೆಳಗ್ಗೆ 7 ಗಂಟೆಗೆ ಖಾಸಗಿ ಹೋಟೆಲ್ ವೊಂದರಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯಿತ ಮುಖಂಡರು, ನಮ್ಮ ಪಕ್ಷದ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಅವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಅವರ ಕೈಹಿಡಿಯಲಿವೆ. ಹಲವು ಉತ್ತಮ ಕೆಲಸವನ್ನು ಅವರು ಮಾಡಿದ್ದಾರೆ. ಹಾಗಾಗಿ ಅವರ ಗೆಲುವು ಖಚಿತ ಎಂದರು.ಮುಖಂಡ ಎಸ್.ಪಿ. ದಿನೇಶ್ ಮಾತನಾಡಿ, ವೀರಶೈವ ಲಿಂಗಾಯಿತ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಈ ಬಾರಿ ಯೋಚಿಸಬೇಕಾಗಿದೆ.
ಕಾರಣ ಬಿ.ಎಸ್. ಯಡಿಯೂರಪ್ಪನವರನ್ನು ಅಧಿಕಾರದಿಂದ ಯಾರು ಕೆಳಗೆ ಇಳಿಸಿದ್ದರೋ ಅದೇ ನಾಯಕರು ಈಗ ಬೊಮ್ಮಾಯಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಹೊರಟಿದ್ದಾರೆ. ಈ ರೀತಿಯ ವಿಚಿತ್ರ ರಾಜಕಾರಣ ಬಿಜೆಪಿಯಲ್ಲೇ ನಡೆಯುತ್ತಿದೆ. ಹಾಗಾಗಿ ವೀರಶೈವ ಮತದಾರರು ಈ ಬಗ್ಗೆ ಯೋಚಿಸಿ ಮತ ಹಾಕಬೇಕು. ಅಲ್ಲದೇ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಅಸಮಾಧಾನ ಮೂಡುತ್ತಿದೆ. ಇಲ್ಲಿ ಸುಮಾರು 13 ಬಿಜೆಪಿ ಮುಖಂಡರು ಆಕಾಂಕ್ಷಿಗಳಾಗಿದ್ದರು. ಈಗ ಅದರಲ್ಲಿ 10 ಜನರು ಪ್ರಚಾರದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಪಕ್ಷದೊಳಗೆ 3 ಗುಂಪುಗಳಾಗಿ ಹೋಗಿದೆ. ಹಿರಿಯ ಸದಸ್ಯರು ಯಾರೂ ಒಲವು ತೋರಿಸುತ್ತಿಲ್ಲ. ಬಿಜೆಪಿಯಲ್ಲಿರುವ ಒಳ ಮುನಿಸುಗಳು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಹಾಯಕವಾಗುತ್ತದೆ ಎಂದರು.ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿಯವರು ಸಲ್ಲದ ಮಾತನಾಡುತ್ತಾರೆ.
ಹಾಗಾದರೆ ಈಗ ಅವರು ಮಾಡುತ್ತಿರುವುದು ಏನು? ಇದು ಕುಟುಂಬ ರಾಜಕಾರಣವೇ ಅಲ್ಲವೇ? ಎಂದು ಪ್ರಶ್ನಿಸಿದ ಅವರು ಆ ಪಕ್ಷದಲ್ಲಿ ಸುಮಾರು 50 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿದವರಿಗೆ ಅವಕಾಶಗಳನ್ನೇ ನೀಡಿಲ್ಲ. ಭಾನುಪ್ರಕಾಶ್, ಮೇಘರಾಜ್ ಸೇರಿದಂತೆ ಹಲವು ಅಸಮಾಧಾನದ ಮುಖಗಳು ಅಲ್ಲಿವೆ ಎಂದರು.ಬಹಳ ಪ್ರಮುಖವಾಗಿ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರೂ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೋ ಅವರೇ ಇಲ್ಲಿ ಗೆದ್ದಿದ್ದಾರೆ. ಶಾಂತವೀರಪ್ಪ ಗೌಡರು, ಜಿ. ಮಾದಪ್ಪ, ಆರ್.ಕೆ. ಸಿದ್ಧರಾಮಣ್ಣ, ಮೀರ್ ಅಜೀಜ್ ಅಹ್ಮದ್ ಮತ್ತು ಆರ್. ಪ್ರಸನ್ನಕುಮಾರ್ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಕೆಲಸ ಮಾಡಿ ಅನುಭವ ಪಡೆದು ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿಗೆ ಈ ಯಾವ ಅನುಭವಗಳೂ ಇಲ್ಲ. ಹಾಗಾಗಿ ಇದು ಕೂಡ ಪ್ರಸನ್ನಕುಮಾರ್ ಗೆಲ್ಲಲು ಸ್ವಲ್ಪ ಭಾಗ ಸಹಾಯಕವಾಗುತ್ತದೆ ಎಂದರು.
ಬಿಜೆಪಿಯಲ್ಲಿ ಅಸಮಾಧಾನ ಇದೆ ಎನ್ನಲು ಮತ್ತೊಂದು ಕಾರಣವೂ ಇದೆ. ಅವರ ಮತ ಕೋರಿಕೆಯ ಕರಪತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಾಗಲಿ, ಸಂಸದ ಬಿ.ವೈ. ರಾಘವೇಂದ್ರ ಅವರ ಹೆಸರನ್ನಾಗಲೀ ಮುದ್ರಿಸಿಯೇ ಇಲ್ಲ ಎಂದರು. ಮತ್ತೋರ್ವ ಮುಖಂಡ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಮಾತನಾಡಿ, ಬಿಜೆಪಿ ಇನ್ನೂ ಟೇಕಾಫ್ ಆಗಿಲ್ಲ. ಅವರ ಜೊತೆ ಅವರದೇ ಪಕ್ಷದ ಶಾಸಕರೂ ಕೂಡ ಮನಸಾರೆ ಕೆಲಸ ಮಾಡುತ್ತಿಲ್ಲ. ಎಲ್ಲರೂ ಒಂದು ರೀತಿಯಲ್ಲಿ ನಾಪತ್ತೆಯಾಗಿ ಆ ಪಕ್ಷದ ಅಭ್ಯರ್ಥಿಯನ್ನೇ ಕೈಬಿಟ್ಟಿದ್ದಾರೆ. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿ ಖಚಿತವಾಗಿದೆ. ಮತ್ತು ಸುಮಾರು 600 ರಿಂದ 650 ಗ್ರಾಪಂ ಸದಸ್ಯರು ವೀರಶೈವರೇ ಆಗಿರುವುದರಿಂದ ಇದು ಕೂಡ ಪಕ್ಷದ ಗೆಲುವಿಗೆ ಕಾರಣವಾಗುತ್ತದೆ ಎಂದರು.ಹೆಚ್.ಎಲ್. ಷಡಾಕ್ಷರಿ ಮಾತನಾಡಿ, ಎಲ್ಲರ ವಿಶ್ವಾಸ ನಮಗೆ ಸಿಕ್ಕಿದೆ. ಆರ್. ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕಾಡಾ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇದು ಕೂಡ ನಮ್ಮ ಗೆಲುವಿಗೆ ಕಾರಣವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೆಚ್.ಪಿ. ಗಿರೀಶ್, ದರ್ಶನ್ ಉಳ್ಳಿ, ಸಿ. ಹನುಮಂತಪ್ಪ, ವಿಜಯಲಕ್ಷ್ಮಿ ಪಾಟೀಲ್ ,ನಾಗರಾಜ್, ಬಸವರಾಜಪ್ಪ, ಜಗನ್ನಾಥ್, ರುದ್ರೇಗೌಡ, ಚಾಮರಾಜ್ , ನಾಗರಾಜ್ ಗೌಡ ಮೊದಲಾದವರಿದ್ದರು.