ಶಿವಮೊಗ್ಗ: ರಾಜ್ಯ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಡಿ.13 ರಿಂದ ಬೆಳಗಾವಿ ಸುವರ್ಣ ವಿಧಾನ ಸೌಧ ಮುತ್ತಿಗೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ರೈತರ ಸುಧೀರ್ಘವಾದ ರೈತ ಚಳುವಳಿ ಪರಿಣಾಮ ಕೇಂದ್ರ ಸರ್ಕಾರ ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆದಿರುವುದು ಸ್ವಾಗತರ್ಹ, ಆದರೂ ರೈತ ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ಕಾನೂನು ಖಾತರಿ ಪಡಿಸುವುದು, ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ವಾಪಾಸ್ಸು ಪಡೆಯುವುದು, ರೈತನ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ವಾಪಾಸ್ಸು ಪಡೆಯುವುದು, ಚಳುವಳಿಯಲ್ಲಿ ಮಡಿದ 700ಕ್ಕೂ ಹೆಚ್ಚು ಜನ ರೈತ ಕುಟುಂಬಗಳಿಗೆ ಪರಿಹಾರ ಕೊಡುವ ಬಗ್ಗೆ ಮೀನಾಮೇಷ ಏಣಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಚಳವಳಿ ಇನ್ನೂ ಮುಂದುವರೆದಿದೆ ಎಂದರು.
ಕೇಂದ್ರ ಸರ್ಕಾರ ತಂದಿದ್ದ ಕಾಯ್ದೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರ ತಂದಿರುವ ಎ.ಪಿ.ಎಂ.ಸಿ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳನ್ನು ವಾಪಾಸ್ಸು ಪಡೆಯಬೇಕು. ಪ್ರಕೃತಿ ವಿಕೋಪ ನಿಧಿಯಲ್ಲಿ ಓ.ಆ.ಖ.ಈ ಕಾಯ್ದೆಗೆ ತಿದ್ದುಪಡಿ ತಂದು ಅತೀವೃಷ್ಟಿಯಿಂದಾದ ಜನ ಜಾನುವಾರುಗಳ ಪ್ರಾಣಹಾನಿ, ಹಾಳಾಗಿರುವ ಮನೆಹಾನಿ ಮತ್ತು ಎಲ್ಲಾ ಬೆಳೆಗಳಿಗೆ ನ್ಯಾಯಯುತ ಪರಿಹಾರ ಕೊಡಬೇಕು. ಭತ್ತ ಮತ್ತು ಮೆಕ್ಕಜೋಳಕ್ಕೆ ನ್ಯಾಯಯುತ ಬೆಲೆ ಕ್ವಿಂಟಾಲ್ ಒಂದಕ್ಕೆ 3000ರೂ. ನಿಗಧಿ ಮಾಡಿ, ಖರೀದಿ ಕೇಂದ್ರ ಪ್ರಾರಂಭಿಸಬೇಕು, ಹನಿ ನೀರಾವರಿಯನ್ನು ಮೊದಲಿನಂತೆ ಎಲ್ಲಾ ವರ್ಗದ ರೈತರಿಗೆ ಶೇ.90 ಸಹಾಯಧನದಲ್ಲಿ ಹೊಸ ದರಪಟ್ಟಿಯ ಪ್ರಕಾರ ಜಾರಿಗೊಳಿಸಬೇಕು. ಕಬ್ಬಿಗೆ ನ್ಯಾಯಯುತ S.ಂ.P ಬೆಲೆ ನಿಗಧಿಪಡಿಸಬೇಕು ಮತ್ತು ಕಬ್ಬಿನ ಬಾಕಿ ಹಣ ತಕ್ಷಣವೇ ನೀಡಬೇಕು.
ಅತೀವೃಷ್ಟಿಯಿಂದ ರೈತರ ಬೆಳೆಹಾನಿಯಾಗಿದ್ದು ಬ್ಯಾಂಕಿನವರು ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು. ರೈತರಿಗೆ ಆಶಾಕಿರಣವಾದ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಡಿ.13ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಬೆಳಗಾವಿ ಸುವರ್ಣ ವಿಧಾನ ಸೌಧ ಮುತ್ತಿಗೆ ಚಳುವಳಿಯನ್ನು ಹಮ್ಮಿಕೊಂಡಿದೆ. ಸರ್ಕಾರ ಸ್ಪಂದಿಸುವ ಆಧಾರದ ಮೇಲೆ ಚಳವಳಿ ಮುಂದುವರೆಲಿದೆ. ಶಿವಮೊಗ್ಗ ಜಿಲ್ಲೆಯಿಂದ 500 ಕ್ಕೂ ಹೆಚ್ಚು ರೈತರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಡಾ. ಬಿ.ಎಂ.ಚಿಕ್ಕಸ್ವಾಮಿ, ಟಿ.ಎಂ.ಚಂದ್ರಪ್ಪ, ಈರಣ್ಣ, ಕೆ.ರಾಘವೇಂದ್ರ, ಕಸಟ್ಟಿ ರುದ್ರೇಶ್, ಸಿ.ಚಂದ್ರಪ್ಪ, ಪಿ.ಡಿ.ಮಂಜಪ್ಪ, ಡಿ.ಹೆಚ್.ರಾಮಚಂದ್ರಪ್ಪ ಉಪಸ್ಥಿತರಿದ್ದರು.